ಬೆಳಗಾವಿ:- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಹಾಗೂ ಪೊಲೀಸರ ನಡೆಯನ್ನು ವಿಪಕ್ಷ ಸೇರಿ ಹಲವರು ವಿರೋಧ ಮಾಡಿದ್ದಾರೆ.
ಇನ್ನೂ ಇದೆ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ರೋಣ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲು ಸಿದ್ದರಾಮಯ್ಯ ಬರುತ್ತಿರುವುದನ್ನು ತಿಳಿದು ಸಿಎಂ ಗೆ ಘೇರಾವ್ ಹಾಕಲು ಪಂಚಮಸಾಲಿ ಹೋರಾಟಗಾರರು ಯತ್ನಿಸಿದರು.
ಇದನ್ನು ತಿಳಿದ ಪೊಲೀಸರು, ಗದಗ ನಗರದ ಹೊರವಲಯದಲ್ಲಿ ಸಿಎಂ ಆಗಮನಕ್ಕೂ ಮುನ್ನ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿದ್ದಾರೆ. ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಮುಖಂಡರಾದ ಉಮೇಶ್ ಚನ್ನು ಪಾಟೀಲ ಸೇರಿದಂತೆ ಹಲವರನ್ನು ಖಾಕಿ ಪಡೆ ಬಂಧಿಸಿದ್ದಾರೆ.
ಗದಗ ಜಿಲ್ಲೆ ರೋಣ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಈ ಘಟನೆ ಜರುಗಿದೆ. ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಮಾಡಿದಕ್ಕೆ ಆಕ್ರೋಶಗೊಂಡಿರುವ ಪಂಚಮಸಾಲಿ ಮುಖಂಡರು, ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಮುಂದಾಗಿದ್ದರು. ಆದರೆ ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.