ಚಿತ್ರದುರ್ಗ: ಅವರಿಬ್ಬರು ಕೋವಿಡ್ ಕಾಲದ ಪ್ರೇಮ ಪಕ್ಷಿಗಳು, ಕೊರೊನಾ ಅಲೆಯ ನಡುವೆ ಪ್ರೇಮದ ಅಲೆಯಲ್ಲಿ ತೇಲಿದವರು. ಇದೀಗ ಅಮೇರಿಕಾದಲ್ಲಿದ್ದ ಯುವ ಪ್ರೇಮಿಗಳ ಪ್ರೇಮ ಕಥೆ, ಚಿತ್ರದುರ್ಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಮತ್ತಷ್ಟು ಗಟ್ಟಿಗೊಂಡಿದೆ. ಈ ವಿಶೇಷ ಮ್ಯಾರೇಜ್ ಸ್ಟೋರಿ ಇಲ್ಲಿದೆ.
ಹೀಗೆ ಕೈ ಕೈ ಹಿಡಿದು ಸಪ್ತಪದಿ ತುಳಿಯುತ್ತಿರುವ ಯುವ ಜೋಡಿ… ಮತ್ತೊಂದು ಕಡೆ ಅರುಂಧತಿ ನಕ್ಷತ್ರ ತೋರಿಸಿ ಮದುವೆ ಖುಷಿಯಲ್ಲಿರುವ ನವ ದಂಪತಿ… ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಚಿತ್ರದುರ್ಗ ನಗರದ GG ಕಲ್ಯಾಣ ಮಂಟಪ.
ಹೌದು ಚಿತ್ರದುರ್ಗ ಮೂಲದ ಅಭಿಲಾಷ್ ಹಾಗೂ ಅಮೇರಿಕಾ ಮೂಲದ ಕೆಲ್ಲಿ ವಿವಾಹ ಮಹೋತ್ಸವ ಭಾರತೀಯ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆಯಿತು. ಚಿತ್ರದುರ್ಗ ಮೂಲದ ಯುವಕ ಅಭಿಲಾಷ್ ಅಮೇರಿಕಾದಲ್ಲಿ BNY ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಇನ್ನೊಂದೆಡೆ ಯುವತಿ ಕೆಲ್ಲಿ ಅಮೇರಿಕಾ ಮೂಲದ ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಮೇರಿಕಾದಲ್ಲೇ ಇದ್ದ ಇಬ್ಬರ ನಡುವೆ ಕೋವಿಡ್ ಸಂದರ್ಭದಲ್ಲಿ ಪ್ರೇಮಾಂಕುರವಾಗಿತ್ತು. ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದ ಅಭಿಲಾಷ್ – ಕೆಲ್ಲಿ ಚಿತ್ರದುರ್ಗದಲ್ಲಿ ಭಾರತೀಯ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ವಿಶೇಷ ವಿವಾಹ ಮಹೋತ್ಸವದಲ್ಲಿ ಅಮೇರಿಕಾ ಮೂಲದ ಕೆಲ್ಲಿ ಫ್ಯಾಮಿಲಿ ಹಾಗೂ ಸ್ನೇಹಿತರು ಕೂಡಾ ಭಾಗಿಯಾಗಿದ್ದು ವಿಶೇಷವಾಗಿತ್ತು. ಅಲ್ದೆ ಯುವತಿ ಕೆಲ್ಲಿ ಭಾರತೀಯ ನಾರಿಯಂತೆ ಸೀರೆಯಲ್ಲಿ ಪುಲ್ ಮಿಂಚಿದ್ರೆ, ಅವರ ಫ್ಯಾಮಿಲಿ ಪಂಚೆ ಹಾಗೂ ಮೈಸೂರು ಪೇಟ ಧರಿಸಿ ಎಂಜಾಯ್ ಮಾಡಿದ್ರು. ಇನ್ನೂ ಈ ವೇಳೆ ನವ ವಿವಾಹಿತೆ ಕೆಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಮನ ಗೆದ್ದಳು. ಒಟ್ನಲ್ಲಿ ಈ ಮದುವೆ ಬರೀ ಎರಡು ಕುಟುಂಬ ಮಾತ್ರವಲ್ಲದೇ ಎರಡು ದೇಶಗಳ ವಿಭಿನ್ನ ಸಂಸ್ಕೃತಿಯನ್ನ ಬೆಸೆಯುವಲ್ಲಿ ಯಶಸ್ವಿಯಾಗಿದ್ದು, ಅಭಿಲಾಷ್ – ಕೆಲ್ಲಿ ಜೋಡಿ ನೂರ್ಕಾಲ ಖುಷಿಯಾಗಿ ಬಾಳಲಿ ಅನ್ನೋದೆ ನಮ್ಮ ಆಶಯ..