ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ (ಸಿಐಟಿಯು ಸಂಯೋಜಿತ) ಗ್ರಾ.ಪಂ ನೌಕರರ 19 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಈ ಎಲ್ಲ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಒತ್ತಾಯಿಸಿ ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಪ್ರಮುಖ ಬೇಡಿಕೆಗಳಾದ ಗ್ರಾ.ಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ್, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ರೂ. 6000 ಪಿಂಚಣಿ ವ್ಯವಸ್ಥೆ ತರಬೇಕು. ಕನಿಷ್ಠ ವೇತನ 31 ಸಾವಿರಕ್ಕೆ ಏರಿಸಬೇಕು, ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು, ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು ಇತ್ಯಾದಿ ಒಟ್ಟು 19 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು, ಸಿಐಟಿಯು ಕಾರ್ಯಕರ್ತರು, ಗ್ರಾ ಪಂ ನೌಕರರು, ಮುಖಂಡರಾದ ಮಹೇಶ ಹಿರೇಮಠ, ಮಾರುತಿ ಚಿಟಗಿ, ಬಸವರಾಜ ಮಂತೂರ, ರುದ್ರಪ್ಪ ಕಂದಗಲ್ಲ, ಮಹೇಶ ದೊಡ್ಡವಾಡ, ಬಸವರಾಜ ಮೇವುಂಡಿ, ಈಶ್ವರ ದಮಾನಿ, ಬಸವರಾಜ ಅರ್ಕಸಾಲಿ, ಮಹಾಲಿಂಗಪ್ಪ ಮುತಾರಿ, ಪ್ರಕಾಶ ನರೇಗಲ್ಲ, ಶಿವಾನಂದ ಚಲವಾದಿ, ರುದ್ರಪ್ಪ ಐನಾಪೂರ, ಮುತ್ತಪ್ಪ ಅರಹುಣಸಿ, ರಮೇಶ ವಾಸನ, ಮಹೇಶ ಮೂಲಿಮನಿ, ನಾಗರಾಜ ಕಣಗಲ್, ಜಗದೀಶ ವಾಲ್ಮೀಕಿ, ಸತೀಶ ಡೊಳ್ಳಿನ, ಪ್ರಭು ಪೂಜಾರ, ಬಸಮ್ಮ ಮಲ್ಲಾಡದ, ಸುಜಾತ ದೊಡ್ಡಮನಿ ಮುಂತಾದವರಿದ್ದರು.