ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿ.ಡಿ.ಎಸ್. ಶ್ರೀಮತಿ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆಯಲ್ಲಿ (ಜಿ.ಐ.ಟಿ.ಓ. ಲೇಡಿಸ್ ವಿಂಗ್) ಜೈನ್ ಸಮಾಜದ ಮಹಿಳೆಯರ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರಿಗೆ ಪರೀಕ್ಷೆಯನ್ನು ಒತ್ತಡವಿಲ್ಲದೆ ಹೇಗೆ ನಿಭಾಯಿಸಬೇಕು ಎಂಬ ವಿಷಯದ ಕುರಿತು ಡಾ. ಸಂತೀಶ ಹೊಂಬಾಳಿಯವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಹೇಗೆ ಓದುವುದು, ಪರೀಕ್ಷೆ ತಯಾರಿ ಮಾಡುವುದು ಇತ್ಯಾದಿ ವಿಷಯಗಳನ್ನು ವಿವರಿಸಿದ ಡಾ. ಹೊಂಬಾಳಿ, ಮಕ್ಕಳು ದಿನಾಲು ನಾಲ್ಕು ಗಂಟೆ ಓದಿನತ್ತ ಗಮನ ಕೊಡಬೇಕು. ಒಂದು ಗಂಟೆ ಬರೆಯಬೇಕು. ಒಂದು ವರ್ಷ ಓದಿದ ಮಕ್ಕಳು ಕೇವಲ ಮೂರು ಗಂಟೆಯಲ್ಲಿ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿ ಸದೃಢರಾಗಬೇಕು, ಪರೀಕ್ಷೆಯ ಸಮಯದಲ್ಲಿ ಅತಿ ನಿದ್ದೆಗೆಟ್ಟು ಓದುವುದು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಜಿಟೋ ಜೈನ್ ಲೇಡಿಸ್ ವಿಂಗ್‌ನ ಪದಾಧಿಕಾರಿಗಳಾದ ಪ್ರೀತಿ ಬನ್ಸಾಲಿ, ಇಂದಿರಾ ಬಾಗಮಾರ, ಲುಂಕಡ್, ಸೀಮಾ ಕೊಠಾರಿ ಮುಂತಾದವರು ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ತುಂಬಿದರು. ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಸ್ಥ ಆರ್.ಆರ್. ಜಾಲಿಹಾಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಗಂಜಿ, ವ್ಹಿ.ಎಸ್. ಮುರಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಕುರಿತು ಆರ್.ಎಮ್. ಪಟ್ಟಣಶೆಟ್ಟಿ ತಮ್ಮ ಅನಿಸಿಕೆಯನ್ನು ತಿಳಿಸಿದರು.