ವಿಜಯಸಾಕ್ಷಿ ಸುದ್ದಿ, ಲಿಂಗಸುಗೂರು: ಭೌತಿಕ ಬದುಕಿನಲ್ಲಿ ಸುಖ-ದುಃಖ ಮತ್ತು ನೋವು-ನಲಿವು ಬರುವುದು ಸಹಜ. ಆಧ್ಯಾತ್ಮಿಕ ಸನ್ಮಾರ್ಗದಲ್ಲಿ ಶಾಂತಿ, ಸಂತೃಪ್ತಿ ಕಾಣಲು ಸಾಧ್ಯ. ಸತ್ಯ ಶುದ್ಧವಾದ ಧರ್ಮಾಚರಣೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸರ್ಜಾಪುರ-ಕುಪ್ಪಿಗುಡ್ಡ ಬ್ರಹ್ಮ ವಿದ್ಯಾಶ್ರಮದ ಹನುಮಯ್ಯ ತಾತನವರ ಮೌನ ಅನುಷ್ಠಾನ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಗವಂತನಿತ್ತ ಅಮೂಲ್ಯ ಕೊಡುಗೆಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಬದುಕು ಕೊಟ್ಟ ಭಗವಂತನನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ಜೀವನದ ಜಂಜಡಗಳಿಂದ ಮುಕ್ತನಾಗಿ ಆತ್ಮ ಜ್ಞಾನವನ್ನು ಪಡೆಯುವ ಗುರಿ ಮನುಷ್ಯನದಾಗಬೇಕು. ತಪಸ್ವಿಗಳ ಸ್ಥಾನಗಳಲ್ಲಿ ವೈರತ್ವ ಪ್ರಾಣಿ-ಜೀವಿಗಳೂ ಕೂಡಾ ಸಾಮರಸ್ಯದಿಂದ ಬಾಳಿದ್ದನ್ನು ಇತಿಹಾಸದ ಪುಟಗಳಿಂದ ತಿಳಿಯುತ್ತೇವೆ. ಆತ್ಮ ಸಾಕ್ಷಾತ್ಕಾರಕ್ಕಾಗಿ ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಬಹು ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.
ದೇವರ ಭೂಪುರ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಧರ್ಮದ ಗುರಿ. ಗುರು, ಗುರಿಯನ್ನು ಹೊಂದಿ ಬಾಳಿದರೆ ಬದುಕು ಉಜ್ವಲ ಎಂದರು.
ನAದವಾಡಗಿ ಮಹಾಂತಲಿಂಗ ಶಿವಾಚಾರ್ಯರು. ಸಂತೇಕೆಲ್ಲೂರು ಗುರುಬಸವ ಸ್ವಾಮಿಗಳು, ಮಸ್ಕಿ ರುದ್ರಮುನಿ ಶಿವಾಚಾರ್ಯರು, ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯರು, ಮಿಟ್ಟಿಮಲ್ಕಾಪುರ ನಿಜಾನಂದ ಸ್ವಾಮಿಗಳು, ಲಿಂಗಸುಗೂರು ಮಾತಾ ನಂದಿಕೇಶ್ವರಿ ಅಮ್ಮನವರು, ಶಾಂಭವಿಮಠ, ವೀರಘೋಟ, ಇರಕಲ್ಲಮಠ, ಹುನಕುಂಟಿ ಶ್ರೀಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪಾಮಯ್ಯ ಮುರಾರಿ, ಅಯ್ಯಪ್ಪ ಮಾಳೂರು, ಶ್ರೀನಿವಾಸ ಅಮ್ಮಾಪುರ, ರತ್ನಮ್ಮ ಸಾಬಣ್ಣ ನಾಯಕ, ರಂಗಮ್ಮ ಮಂಜುನಾಥ ನೆಲೊಗಿ, ಶೋಭಾರಾಣಿ ಭಾಗವಹಿಸಿದ್ದರು.
ಹನುಮಯ್ಯ ತಾತನವರು ಮಾತನಾಡಿ, ಮೌನಾಷ್ಠಾನ ಮಂಗಲಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ದಯಮಾಡಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯವಾಗಿದ್ದು, ಅನುಷ್ಠಾನದ ಫಲ ಸಕಲ ಸದ್ಭಕ್ತರಿಗೆ ಸಲ್ಲುತ್ತದೆ ಎಂದರು.