ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಜೀವವನ್ನು ಬದುಕಿಸಲು ಮತ್ತೊಂದು ಮುಗ್ಧ ಜೀವವನ್ನು ಬಲಿ ತಗೆದಕೊಳ್ಳುವ ಪದ್ಧತಿ ರಾಷ್ಟ್ರ, ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಹಿಂದಿನಿಂದಲೂ ನಡೆಯುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನುಗಳು ಜಾರಿಯಾಗಿದ್ದು, ಯಾರಾದರೂ ದುಡ್ಡಿಗಾಗಿ ದೇಹದ ಅಂಗಾಂಗಗಳ ಮಾರಾಟಕ್ಕೆ ಮುಂದಾದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಪ್ರಾಚಾರ್ಯ ಜೈಹನುಮಾನ ಎಚ್.ಕೆ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಯೂತ್ ರೆಡ್ ಕ್ರಾಸ್ ಹಾಗೂ ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಂಯುಕ್ತಾಶ್ರಯದಲ್ಲಿ ನಡೆದ `ಅಂಗಾಂಗ ದಾನ ಜಾಗೃತಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಾನವ ಅಂಗ ಕಸಿ ಕಾಯಿದೆ-೧೯೯೪ರ ಪ್ರಕಾರ ಅಂಗಾಂಗ ಮಾರಾಟ ನಿಷೇಧಿಸಲಾಗಿದ್ದು, ಅಕ್ರಮ ಎಸಗಿದವರ ವಿರುದ್ಧ ೫ರಿಂದ ೧೦ ವರ್ಷ ಕಠಿಣ ಶಿಕ್ಷೆ ಮತ್ತು ೨೦ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೂ ದಂಡ ವಿಧಿಸಲಾಗುವುದು. ಹೀಗಾಗಿ ಅಂಗಾಂಗ ಮಾರಾಟಕ್ಕೆ ಅವಕಾಶವಿಲ್ಲ. ಕ್ಯಾನ್ಸರ್, ಎಚ್.ಐ.ವಿ ಕಾಯಿಲೆ ಇರುವವರನ್ನು ಹೊರತುಪಡಿಸಿ, ವಯಸ್ಸು, ಲಿಂಗ, ಧರ್ಮದ ನಿರ್ಬಂಧವಿಲ್ಲದೆ ಯಾರು ಬೇಕಾದರೂ ದಾನಿಯಾಗಬಹುದು ಎಂದರು.
ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಂಸ್ಥೆಯ ಲೀಡ್ ಸರ್ಜನ್ ಮತ್ತು ಕಾರ್ಯಕ್ರಮದ ನಿರ್ದೇಶಕ ಡಾ. ಅವಿನಾಶ ಓದುಗೌಡರ ಮಾತನಾಡಿ, ಮನುಷ್ಯನ ಮರಣದ ನಂತರ ಕೂಡ ಅವನ ಕೆಲವೊಂದು ಅಂಗಾಂಗಗಳು ಇನ್ನೊಬ್ಬ ವ್ಯಕ್ತಿಯ ಶರೀರದಲ್ಲಿದ್ದು, ಜೀವಿಸುವ ಅಕಾಶ ಇದೆ. ಆದರೆ, ಯಾವುದೇ ರೀತಿಯ ಅಕ್ರಮ ಹಾಗೂ ಹಣಕ್ಕಾಗಿ ಅಂಗಾಂಗಗಳನ್ನು ದಾನ ಮಾಡದೇ ಅಗತ್ಯವಿರುವ ರೋಗಿಗಳಿಗೆ ತಾವು ಮರಣದ ನಂತರ ಅಂಗಾಂಗಗಳನ್ನು ದಾನ ಮಾಡಬಹುದು. ಇಲ್ಲಿ ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶವು ದೊರೆತಿದೆ. ಸತ್ತ ನಂತರ ದೇಹ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಬದಲು ಮತ್ತೊಬ್ಬರ ದೇಹದಲ್ಲಿ ಬದುಕುಳಿಯಲು ಅವಕಾಶವಿದೆ. ಹೀಗಾಗಿ ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ಈ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ಸ್ಥಳೀಯ ಆಡಳಿತ ಮಂಡಳಿಯ ಚೇರಮನ್ ಎಸ್.ಎ. ಮಾನ್ವಿ, ಡಾ. ಪಿ. ನೂರಾಣಿ, ಜೆ.ಟಿ ಕಾಲೇಜಿನ ಪ್ರಾಚಾರ್ಯ ಪಿ.ಜಿ. ಪಾಟೀಲ, ಉಪನ್ಯಾಸಕ ಡಾ. ವಿಜಯ ಮುರದಂಡೆ, ಡಾ. ಜ್ಯೋತಿ ಸಿ.ವಿ, ಡಾ. ಶ್ರೀನಿವಾಸ ಪಾಲ್ಕೊಂಡ, ಶರತ್ ದರಬಾರೆ ಸೇರಿದಂತೆ ಇತರರಿದ್ದರು. ದೈಹಿಕ ನಿರ್ದೇಶಕ ಹಾಗೂ ಯೂತ್ ರೆಡ್ ಕ್ರಾಸ್ ಸಂಯೋಜಕ ಡಾ. ಸಿ.ಬಿ. ರಣಗಟ್ಟಿಮಠ ಸ್ವಾಗತಿಸಿದರು. ವಿದ್ಯಾರ್ಥಿ ಚೈತ್ರಾ ಗೌಡರ ನಿರೂಪಿಸಿದರು.
ಜೀವಿಸಲು ಒಂದು ಕಿಡ್ನಿ ಸಾಕು ಮತ್ತು ವ್ಯಕ್ತಿ ಯಕೃತ್ತಿನ ಅಲ್ಪ ಭಾಗವನ್ನು ದಾನ ನೀಡಿದರೆ, ಈ ಭಾಗ ಮೂರು ವಾರದಲ್ಲಿ ಪುನರುತ್ಪತ್ತಿ ಆಗುತ್ತದೆ. ಅಂಗಾಂಗ ದಾನ ಮಾಡಿದರೆ ದೇಹ ವಿರೂಪಗೊಳ್ಳುವುದಿಲ್ಲ. ಹೀಗಾಗಿ ದಾನದ ಬಳಿಕ ಶವಸಂಸ್ಕಾರದ ವಿಧಿ-ವಿಧಾನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಮನವರಿಕೆ ಮಾಡಬೇಕು ಎಂದು ಜೈಹನುಮಾನ ಎಚ್.ಕೆ ತಿಳಿಸಿದರು.