ಮಂಡ್ಯ:- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಳೆ ಚಾಲನೆ ಸಿಗಲಿದ್ದು, ಈ ಹಿನ್ನೆಲೆ ಇಂದು ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಮಂಡ್ಯಕ್ಕೆ ಆಗಮಿಸಿದ್ದಾರೆ.
ಮಂಡ್ಯಕ್ಕೆ ಆಗಮಿಸುತ್ತಿದ್ದಂತೆ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಗಣಿಗ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಡಿಸಿ ಡಾ. ಕುಮಾರ್ ಅವರು ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿದರು. ಇದೇ ವೇಳೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ, ಕನ್ನಡ ತವರು ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿಲ್ಲ. ಆದ್ರೆ ಕನ್ನಡ ಹಲವು ಸಮಸ್ಯೆಗಳನ್ನ ಎದುರಿಸುತ್ತಿದೆ. ಇದರ ಬಗ್ಗೆ ಚಿಂತನೆ ಆಗಬೇಕು. ಆಧುನಿಕತೆಯ ಪ್ರಭಾವ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗಲು ಕಾರಣ ಎಂದರು.
ಮಂಡ್ಯ ಜನರ ಪ್ರೀತಿ ವಿಶ್ವಾಸ ಕಂಡು ಕಣ್ತುಂಬಿಕೊಂಡಿದ್ದೇನೆ. ಎಲ್ಲ ಕಾರ್ಯಕಲಾಪದಲ್ಲಿ ಕನ್ನಡ ಬಂಧುಗಳು ಭಾಗವಹಿಸಬೇಕು. ನನ್ನನ್ನ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆ. ಇಂತಹ ಉತ್ಸವದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಹೆಮ್ಮೆಯ ವಿಚಾರ, ನಿಜಕ್ಕೂ ತುಂಬಾ ಸಂತೋಷವಾಗಿದೆ ಎಂದರು.