ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಜಾತ್ರೆಯು ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ, ಅರ್ಥಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಶ್ರೀಮಠದ ಭಕ್ತರಿಗೆ ೨೦೨೫ರ ಮಹಾಜಾತ್ರೋತ್ಸವದ ಆಹ್ವಾನವನ್ನು ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ.
ಅದಕ್ಕೆ ಈ ಬಾರಿಯೂ ಜನೇವರಿ 15,16 ಹಾಗೂ17 ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದು, ಅಜ್ಜನ ಜಾತ್ರೆಗೆ ಬನ್ನಿ ಎಂದು ಆಹ್ವಾನ ನೀಡಲಾಗಿದೆ. ಈ ಚಿತ್ರವನ್ನು ಶ್ರೀ ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡದ ಮುಂಭಾಗದ ವಿಶಾಲವಾದ ಆವರಣದಲ್ಲಿ ಸೆರೆ ಹಿಡಿಯಲಾಗಿದೆ.
ಮುಸ್ಸಂಜೆಯ ಹೊತ್ತಿನಲ್ಲಿ ಸೆರೆ ಹಿಡಿದ ಈ ಚಿತ್ರವು ಅತ್ಯಂತ ಮನೋಹರವಾಗಿದೆ. ಮುಗ್ದ ಮನಸ್ಸಿನ ಶ್ರೀ ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಸುಮಾರು 1500 ಮಕ್ಕಳು ಮೇಣದಬತ್ತಿ ಬೆಳಗುವದರ ಮೂಲಕ `ಅಜ್ಜನ ಜಾತ್ರೆಗೆ ಬನ್ನಿ’ ಎಂದು ಭಕ್ತರನ್ನು ಆಹ್ವಾನಿಸುವ ಸನ್ನಿವೇಶ ಅನನ್ಯವಾದುದು.