ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವೂ ಮುಖ್ಯ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವ್ಯಸನರಹಿತ ಸಮಾಜ, ಮೂಢನಂಬಿಕೆ, ಅಂಧಶೃದ್ಧೆ, ಶೋಷಣೆಮುಕ್ತ ಸಮಾಜ ಶರಣರ ಪ್ರಗತಿಪರ ಚಿಂತನೆಗಳಾಗಿದ್ದವು. ಶರಣರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಇದೆ. ವಚನಕಾರರ ದೃಷ್ಟಿಕೋನ ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವಾಗಿತ್ತು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. 

Advertisement

ಲಿಂಗಾಯತ ಪ್ರಗತಿಶೀಲ ಸಂಘದ ೨೭೨೪ನೇ ಶಿವಾನುಭವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ತಾತ್ವಿಕ ಚಿಂತನೆಯನ್ನು ಉಪನಿಷತ್ತುಗಳು ಮಾಡಿದರೆ, ವಚನಗಳು ತಾತ್ವಿಕತೆಯ ಜೊತೆಗೆ ಸಾಮಾಜಿಕ ಚಿಂತನೆ ಮಾಡಿದವು. ವೇದಗಳಲ್ಲಿ ಹೇಳಿದ್ದನ್ನು ಪಾಲನೆ ಮಾಡುವುದು ಬಲಪಂಥೀಯವಾದರೆ, ಅದನ್ನು ವಿಶ್ಲೇಷಣೆ ಮಾಡಿ ಸರಿಯಾದುದರ ಬಗ್ಗೆ ಸಮಾಜದಲ್ಲಿ ತಿಳಿಸಿ ಜನಮನದಲ್ಲಿ ಜಾಗೃತಿ ಮೂಡಿಸಿದವರು ಶರಣರು. ಸಮಾಜ ಸೇವೆ ಮನುಷ್ಯರ ಕರ್ತವ್ಯವಾಗಬೇಕು ಎಂಬುದೇ ಪ್ರಗತಿಪರ ಚಿಂತನೆಯಾಯ್ತು. ವಚನಗಳು ಸಮಾಜದಲ್ಲಿ ಬದುಕುವ ಮಾರ್ಗ ತೋರಿಸುತ್ತವೆ. ವಚನಗಳು ಸಾಮಾಜಿಕ ನ್ಯಾಯವನ್ನು ಒದಗಿಸುತ್ತವೆ ಎಂದರು.

ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪಡೆದ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಅಂದಯ್ಯ ಅರವಟಗಿಮಠ ಇವರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನೇರವೇರಿಸಿದರು. ಧರ್ಮಗ್ರಂಥ ಪಠಣವನ್ನು ರೇಣುಕಾ ಲಿಂಗರಾಜ ಅಮಾತ್ಯ, ವಚನ ಚಿಂತನವನ್ನು ವಿಜಯಶ್ರೀ ಕಾಶಪ್ಪ ಇಲಕಲ್ ಇವರುಗಳು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಕೆ.ಎಸ್. ನಾಗರಾಜ ಹಾಗೂ ಸಹೋದರರು, ವೀರಭದ್ರಪ್ಪ ಸಂಗಪ್ಪ & ಕಂಪನಿ ವೆಸ್ಕೋಹೌಸ್ ಸೊಂಡೂರು ಇವರ ಪರವಾಗಿ ಸಾವೆಂತ್ರವ್ವ ಪಿಳ್ಳಿ ಇವರು ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರೊ. ಶಿವಾನಂದ ಹೊಂಬಳ ಸ್ವಾಗತಿಸಿದರೆ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಸಿದ್ದಲಿಂಗೇಶ ಸಜ್ಜನಶೆಟ್ಟರ ಮಾತನಾಡಿ, ಉಪನಿಷತ್‌ಗಳಲ್ಲಿ ಇರುವುದೆಲ್ಲ ವಚನಗಳಲ್ಲಿ ಇದೆ. ಆದರೆ ವಚನಗಳಲ್ಲಿ ಇರುವುದೆಲ್ಲ ಉಪನಿಷತ್‌ಗಳಲ್ಲಿ ಇಲ್ಲ. ಶರಣರು ನುಡಿದಂತೆ ನಡೆದು ಕಾಯಕಸಿದ್ಧಾಂತ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here