ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ೨ನೇ ಅವಧಿಗಾಗಿ ಸೆ. ೨ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲ ಪಡೆದು ಸ್ಪರ್ಧಿಸಿ, ಅಧ್ಯಕ್ಷ ಸ್ಥಾನಕ್ಕೇರಿದ ೧೫ನೇ ವಾರ್ಡಿನ ಬಿಜೆಪಿ ಸದಸ್ಯ ಫಕೀರಪ್ಪ ಮಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೇರಿದ ೧೭ನೇ ವಾರ್ಡಿನ ಬಿಜೆಪಿ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಅವರ ವಿರುದ್ಧ ಸೇರಿದಂತೆ ಬಿಜೆಪಿಯ ಇತರೆ ನಾಲ್ಕು ಜನ ಸದಸ್ಯರ ವಿರುದ್ಧ ಗದಗ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸದಸ್ಯತ್ವ ರದ್ದು ಪಡಿಸುವಂತೆ ಆಗ್ರಹಿಸಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಪ್ರಕರಣ ದಾಖಲಾಗಿದೆ.
ಇದರ ವಿಚಾರಣೆಯು ೨೦೨೫ರ ಜನವರಿ ೨ರಂದು ಮಧ್ಯಾಹ್ನ ೪ ಗಂಟೆಗೆ ನಡೆಯಲಿದೆ. ವಿಚಾರಣೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಆರು ಜನ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರಡಗಿ ಅವರು ನರೇಗಲ್ ಪಟ್ಟಣ ಪಂಚಾಯಿತಿಯ ೬ನೇ ವಾರ್ಡಿನ ಸದಸ್ಯೆ ವಿಜಯಲಕ್ಷಿö್ಮÃ ಚಲವಾದಿ, ೧೨ನೇ ವಾರ್ಡಿನ ಸದಸ್ಯ ಮಲ್ಲಿಕಸಾಬ್ ರೋಣದ, ೧೩ನೇ ವಾರ್ಡಿನ ಸದಸ್ಯ ಈರಪ್ಪ ಜೋಗಿ, ೧೪ನೇ ವಾರ್ಡಿನ ಸದಸ್ಯ ಫಕೀರಪ್ಪ ಬಂಬ್ಲಾಪುರ, ೧೫ನೇ ವಾರ್ಡಿನ ಸದಸ್ಯ ಫಕೀರಪ್ಪ ಮಳ್ಳಿ, ೧೭ನೇ ವಾರ್ಡಿನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಇವರ ವಿರುದ್ಧ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ ೧೯೮೭ರ ಕಲಂ ೪ರಡಿ ಸದಸ್ಯತ್ವ ರದ್ದು ಪಡಿಸುವಂತೆ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಅಧಿಕಾರ ಪಡೆದು ಕಾರ್ಯಕ್ರಮಗಳ ಚಾಲನೆ, ಉದ್ಘಾಟನೆ ಹಾಗೂ ಇತರೆ ಕೆಲಸಗಳಲ್ಲಿ ನಿರತರಾಗಿದ್ದ ಆರು ಸದಸ್ಯರಿಗೆ ಚಿಂತೆ ಶುರುವಾಗಿದೆ.
ಸದ್ಯ ನ್ಯಾಯವಾದಿಗಳ ಮೂಲಕ ಅಥವಾ ತಾವೇ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು, ಇಲ್ಲವಾದರೆ ಅರ್ಹತೆಗಳ ಆಧಾರದ ಮೇಲೆ ನಿಖಾಲಿ ಮಾಡಲಾಗುವುದು ಅಥವಾ ಮುದ್ದತ್ತಿನ ದಿನಾಂಕವನ್ನು ತಿಳಿದುಕೊಳ್ಳಬೇಕು ಎಂದು ಡಿ. ೧೯ರಂದು ಹೊರಡಿಸಲಾದ ನೋಟಿಸ್ನಲ್ಲಿ ಕಾಣಿಸಲಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಾಮಾನ್ಯ ಮಿಸಲಾತಿ ಎಂದು ದಿನಾಂಕ ನಿಗದಿಯಾದ ಬಿಜೆಪಿಯ ಆರು ಜನ ಸದಸ್ಯರು ಸೆ.೧ರವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದಂತಿದ್ದರು. ಅಂದು ರಾತ್ರಿ ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ಅವರ ನೇತೃತ್ವದಲ್ಲಿ ಬಿಜೆಪಿ ತನ್ನ ಆರು ಜನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಹಾಗಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯಂದು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬಂದು ನಾಮಪತ್ರ ಸಲ್ಲಿಸಿ, ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲ ಪಡೆದು ಆಯ್ಕೆಯಾದವರು ಈಗ ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ.
ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಆರಿಸಿ ಬಂದಿರುವ ೬ ಬಿಜೆಪಿ ಸದಸ್ಯರು, ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡಿರುವ, ಧ್ವಜ ಹಿಡಿದಿರುವ ಫೋಟೋ, ವಿಡಿಯೋ ನಮ್ಮ ಬಳಿ ಇವೆ. ಅಷ್ಟೇ ಅಲ್ಲದೆ ಅವರು ನಮ್ಮ ಪಕ್ಷದಲ್ಲಿದ್ದು ಕಾಂಗ್ರೆಸ್ ಪರವಾಗಿ ಮಾಡಿರುವ ಕೆಲಸಗಳ ಆಧಾರ ಸಹಿತ ನ್ಯಾಯಾಲಯಕ್ಕೆ ಹೋಗಿದ್ದೇವೆ. ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನಿನಂತೆ ತಕ್ಕ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯ ನೀಡಿದ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ನಮಗೆ ನೋಟಿಸ್ ಇನ್ನೂ ತಲುಪಿಲ್ಲ, ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ನಾವಿನ್ನೂ ಬಿಜೆಪಿಗರೇ. ನರೇಂದ್ರ ಮೋದಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರೇ ನಮ್ಮ ನಾಯಕರು ಎಂದಿದ್ದಾರೆ.
ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ನಾವು ಬಿಜೆಪಿ ಪಕ್ಷದ ವಿರುದ್ಧ ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ. ಆದರೆ ಸ್ಥಳೀಯ ನಾಯಕರ ಸಹಕಾರ ಸಿಗದ ಕಾರಣ ಇತರ ಸದಸ್ಯರ ಬೆಂಬಲ ಪಡೆದು ಆಯ್ಕೆಯಾಗಿದ್ದೇವೆ. ಹಾಗಾಗಿ ನಾವು ನೋಟಿಸ್ ಬಂದ ನಂತರ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.