ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕವು ಹಲವಾರು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಬರಲಿರುವ ದಿನಮಾನಗಳಲ್ಲಿ ಇನ್ನಷ್ಟು ಸಾಮಾಜಿಕ ಉಪಯುಕ್ತ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ಶುಕ್ರವಾರ ಗದಗ ಜಿಲ್ಲಾ ಮಹಾಸಭಾ ಘಟಕದ ಕಾರ್ಯಕಾರಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯ ಘಟಕದ ಸೂಚನೆಯಂತೆ ಕಾರ್ಯಗಳು ಜಿಲ್ಲೆಯಾದ್ಯಂತ ನಡೆದಿದ್ದು, ಇದೀಗ ಗದಗ ಜಿಲ್ಲೆಯ ಎಲ್ಲ ತಾಲೂಕಗಳ ಯುವ ಘಟಕಗಳನ್ನು ರಚಿಸುವದು, ಸದಸ್ಯರನ್ನಾಗಿಸುವದು ಅದಕ್ಕಾಗಿ ಉಸ್ತುವಾರಿಗಳನ್ನು ನೇಮಿಸಿದ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು.
ರೋಣ ಹಾಗೂ ಗಜೇಂದ್ರಗಡ-ಭೀಮರಡ್ಡೇಪ್ಪ ರಡ್ಡೇರ, ನರಗುಂದ-ಮಲ್ಲಾಪೂರ ಹಾಗೂ ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಮುಂಡರಗಿ-ಶಿವಪ್ಪ ಅಂಕದ ಹಾಗೂ ವಿರುಪಾಕ್ಷಪ್ಪ ಲಕ್ಕುಂಡಿ, ಶಿರಹಟ್ಟಿ- ವೀರನಗೌಡ ಪಾಟೀಲ ಹಾಗೂ ಬಾಪೂಜಿ ಪಾಟೀಲ, ಗದಗ-ಶಿವರಾಜ ಹಿರೇಮನಿಪಾಟೀಲ ಹಾಗೂ ವಿಜಯಾನಂದ ಮುತ್ತಿನಪೆಂಡಿಮಠ ಈ ಪ್ರಕಾರ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು, ಇವರುಗಳು ತಾಲೂಕಾ ಯುವ ಘಟಕಗಳ ರಚನಾ ಕಾರ್ಯ ನಿರ್ವಹಿಸುವರು ಎಂದರು.
ಜಿಲ್ಲಾ ಘಟಕದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಸದಾಶಿವಯ್ಯ ಮದರಿಮಠ ಅವರನ್ನು ಈಗಾಗಲೇ ಆಯ್ಕೆ ಮಾಡಿದಂತೆ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ದಾನಿಗಳ ಸಹಾಯ ಸಹಕಾರ ಅವಶ್ಯವಿದ್ದು, ಸಮಾಜಬಾಂಧವರು ಕೈಜೋಡಿಸಬೇಕೆಂದರು. ಇದೇ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಯ ಹಂತವನ್ನು ವೀಕ್ಷಿಸಲಾಯಿತು.
ಪ್ರಾರಂಭದಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿ ನಿರೂಪಿಸಿದರು. ಕೋಶಾಧ್ಯಕ್ಷ ಚನ್ನವೀರ ಹುಣಶೀಕಟ್ಟಿ ವಂದಿಸಿದರು.
ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರುಗಳಾದ ಬಸವರಾಜ ಅಂಗಡಿ, ಭೀಮರಡ್ಡೇಪ್ಪ ರಡ್ಡೇರ, ವಿಜಯ ಲಕ್ಷ್ಮೀ ಮಾನ್ವಿ, ಚನ್ನಯ್ಯ ಸಂಗಳಮಠ, ಕಾರ್ಯದರ್ಶಿಗಳಾದ ಕಾಶಪ್ಪ ಗದಗಿನ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಸುವರ್ಣ ಶೆಲ್ಲಿಕೇರಿ, ನಿರ್ಮಲಾ ಚಿಕ್ಕನಗೌಡ್ರ ಮುಂತಾದವರಿದ್ದರು.
ತಾಲೂಕಾ ಯುವ ಘಟಕಕ್ಕೆ ಸದಸ್ಯರಾಗಲು ೨೫೦ ರೂ. ಸದಸ್ಯತ್ವ ನೋಂದಣಿ ಶುಲ್ಕವಿದ್ದು, ೨೦-೩೦ ವರ್ಷದೊಳಗಿನ ಯುವಕರು ಸದಸ್ಯತ್ವ ಪಡೆಯಬಹುದು. ೩೧ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ನಂತರ ತಾಲೂಕು ಘಟಕವನ್ನು ಮಾಡಲಾಗುವದು. ಹಾಗೆಯೇ ಮಹಿಳಾ ಯುವ ಘಟಕವನ್ನು ಇದೇ ಕ್ರಮದಲ್ಲಿ ರಚಿಸಲಾಗುವದು ಎಂದು ಶರಣಬಸಪ್ಪ ಗುಡಿಮನಿ ತಿಳಿಸಿದರು.