ವಿಜಯಸಾಕ್ಷಿ ಸುದ್ದಿ, ಬೇಲೂರು: ಪ್ರಯತ್ನಶೀಲ ಮನುಷ್ಯನಿಗೆ ಜಯ ನಿಶ್ಚಿತ. ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಹಣೆಬರಹದಲ್ಲಿ ಭವಿಷ್ಯವಿಲ್ಲ. ಹಣೆಯ ಬೆವರಿನಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಸಮೀಪದ ಶ್ರೀಮದ್ರಂಭಾಪುರಿ ಶಾಖಾ ಕಾರ್ಜುವಳ್ಳಿ ಹಿರೇಮಠದಲ್ಲಿ ಜರುಗಿದ ಧರ್ಮ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನಿಜವಾದ ಸಂಬಂಧಗಳು ಸಮಯ ಮತ್ತು ಗೌರವ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮ ವಿಶ್ವಾಸದಿಂದ ಬಾಳಿದರೆ ಜಯ ನಿಶ್ಚಿತ. ಬದುಕು ಹೇಗೆ ಸಾಗಿಸುವುದೆಂದು ಭಯಪಡಬಾರದು. ಗೂಡಿನಿಂದ ಹೊರಕ್ಕೆ ಹೋಗುವ ಪಕ್ಷಿಗೆ ಕಾಳುಗಳು ಎಲ್ಲಿವೆ ಎಂದು ಗೊತ್ತಿರುವುದಿಲ್ಲ. ಆದರೂ ಹಾರುತ್ತಾ ಹೋಗಿ ತನ್ನ ಆಹಾರವನ್ನು ಪಡೆಯುತ್ತದೆ. ಮನುಷ್ಯ ಸಹ ಕ್ರಿಯಾಶೀಲನಾಗಿ ಶ್ರಮದಿಂದ ದುಡಿದರೆ ಜೀವನ ಸಮೃದ್ಧಗೊಳ್ಳುವುದರಲ್ಲಿ ಅನುಮಾನವಿಲ್ಲ.
ನೇತೃತ್ವ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬದುಕಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಮತ್ತು ಗುರು ಮಾರ್ಗದರ್ಶನ ಅವಶ್ಯಕ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಲಿಂ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ೪೬ನೇ ವರ್ಷದ ಪುಣ್ಯ ಸ್ಮರಣೋತ್ಸವ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದ್ದು ಸಮಾಧಾನ ತಂದಿದೆ ಎಂದ ಅವರು, ಇದೇ ಸಂದರ್ಭದಲ್ಲಿ ಪಟ್ಟಾಧಿಕಾರದ ೪ನೇ ವರ್ಷದ ವರ್ಧಂತಿ ಜನ್ಮ ದಿನೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಎಂದರು.
ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿದರು. ನಾಗವಂದ, ಹಾರನಹಳ್ಳಿ, ಕೆಸವತ್ತೂರು, ತೇಜೂರು ಶ್ರೀಗಳು ಉಪಸ್ಥಿತರಿದ್ದರು. ಸಂಸದ ಶ್ರೇಯಸ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಆಲೂರಿನ ಮಹೇಶ್ ಎಂ.ಎಸ್. ಇವರಿಗೆ ಧರ್ಮ ಹಿತಚಿಂತಕ ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಎ.ಎನ್. ರೇಣುಕಪ್ರಸಾದ್, ಅನಿಲ್ ಬೂದಿಹಾಲ್, ಚನ್ನಬಸಪ್ಪ ಹೆದ್ದುರ್ಗ ಇವರಿಗೆ ಗೌರವ ಗುರುರಕ್ಷೆ ನೀಡಲಾಯಿತು.
ಶಾಸಕ ಸಿಮೆಂಟ್ ಮಂಜು ಮುಖ್ಯ ಅತಿಥಿಗಳಾಗಿದ್ದರು. ಮಹೇಶ್ ಚಿಕ್ಕೊಟೆ ಸ್ವಾಗತಿಸಿದರು. ಹಾಸನ ಗ್ಯಾಸ್‌ನ ಮಂಜುನಾಥ ಪ್ರಾರ್ಥಿಸಿದರು. ಮೈತ್ರಿ ಎಸ್.ಮಾದಗುಂಡಿ ಇವರಿಂದ ಭರತನಾಟ್ಯ ಪ್ರದರ್ಶನ, ಕಾರ್ಜುವಳ್ಳಿ ದೇವಿಕ ಕುಮಾರ್ ಇವರಿಂದ ನಿರೂಪಣೆ ನಡೆಯಿತು.
ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅದೇ ದಾರಿಯಲ್ಲಿ ಶರಣರು ಶ್ರಮಿಸಿ ದುಡಿಮೆಯ ಮಹತ್ವವನ್ನು ಸಾರಿದ್ದಾರೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಆಧ್ಯಾತ್ಮ ಜೀವಿಗಳಾಗಿದ್ದು, ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. ಗುರು ಪರಂಪರೆಯ ಆದರ್ಶ ವಿಚಾರಧಾರೆಗಳನ್ನು ಜನಮನಕ್ಕೆ ಮುಟ್ಟಿಸಿದ ಶ್ರೇಯಸ್ಸು ಅವರದಾಗಿದೆ ಎಂದು ಹರುಷ ವ್ಯಕ್ತ ಪಡಿಸಿ, ಶ್ರೀ ಪೀಠದಿಂದ ರೇಶ್ಮೆ ಮಡಿ ಸ್ಮರಣಿಕೆ, ಫಲ-ಪುಷ್ಪವಿತ್ತು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದರು.