ಮಂಡ್ಯ: ಭಾರಿ ವಿರೋಧದ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದೆ. ಚಿಕನ್ ಕಬಾಬ್, ಚಿಕನ್ ಸಾರು, ಕೋಳಿ ಮೊಟ್ಟೆ ಸೇರಿದಂತೆ ಮಾಂಸಾಹಾರ ಊಟ ಹಂಚಲಾಗಿದೆ. ಸಾಹಿತ್ಯ ಆಸಕ್ತರಿಗೆ ಪ್ರಗತಿಪರ ಸಂಘಟನೆಗಳು ಬಾಡೂಟ ವಿತರಿಸಿದೆ.
ಇನ್ನೂ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆಗಾಗಿ ಜಟಾಪಟಿ ಉಂಟಾಗಿದೆ. ಅಲ್ಲದೆ ಈ ಮಧ್ಯೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದದ ಬಳಿಕ ಕಡೆಗೂ ಪ್ರಗತಿಪರರು ಸಮ್ಮೇಳದ ಊಟದ ಕೌಂಟರ್ನಲ್ಲೇ ಮಾಂಸಾಹಾರ ವಿತರಣೆ ಮಾಡಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದು ಜನರು ಮಾಂಸದೂಟಕ್ಕೆ ಮುಗಿಬಿದ್ದಿದ್ದರು.
ಈ ವೇಳೆ ಸಾರ್ವಜನಿಕರಿಂದ ಪೊಲೀಸರು ಮಾಂಸದೂಟವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಆಗ್ರಹಿಸುತ್ತಿದ್ದ ಪ್ರಗತಿಪರರು ನಿನ್ನೆ ಸಮ್ಮೇಳನದಲ್ಲಿ ಬಾಡೂಟ ಸವಿದಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಇದು ಆಹಾರ ಅಸಮಾನತೆ ಎತ್ತಿ ಹಿಡಿದ ಸಮ್ಮೇಳನವೆಂದು ಕಿಡಿಕಾರಿದ್ದಾರೆ.