ಬೆಳಗಾವಿ:- ಬೆಳಗಾವಿ ಬಿಮ್ಸ್ನಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬದವರು ಆಕ್ರೋಶ ಹೊರ ಹಾಕಿದ್ದಾರೆ.
ವೈಶಾಲಿ ಕೊಟಬಾಗಿ ಮೃತ ಬಾಣಂತಿ. ಹುಕ್ಕೇರಿ ತಾಲೂಕಿನ ಗೌಡವಾಡದ ನಿವಾಸಿ ಆಗಿರುವ ಇವರಿಗೆ 4 ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್ಗೆ ಸ್ಥಳಾಂತರ ಮಾಡಿದ್ದರು. ಶನಿವಾರ ಬೆಳಗ್ಗೆ ಬಿಮ್ಸ್ನಲ್ಲಿ ವೈಶಾಲಿಗೆ ಸಿಜೇರಿಯನ್ ಆಗಿದ್ದು, ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾರೆ.
ಬಳಿಕ ವೈಶಾಲಿ ಆರೋಗ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಭಾನುವಾರ ಬೆಳಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.