ವಿಜಯಸಾಕ್ಷಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ೩೯ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಾಚರಣೆ ದಿನದಿಂದ ದಿನಕ್ಕೆ ಮೆರಗು ಪಡೆಯುತ್ತಿದೆ. ಶತಮಾನೋತ್ಸವದ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯದ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲರು ಮಂಗಳವಾರ ಸಾಂಕೇತಿಕವಾಗಿ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಸುವರ್ಣ ಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಲು ಆಹ್ವಾನ ನೀಡಿದರು.
ಬೆಳಿಗ್ಗೆ ರಾಮತೀರ್ಥನಗರದಲ್ಲಿ ಇರುವ ಅಣ್ಣು ಗುರೂಜಿ ಅವರ ಮನೆಗೆ, ಹನುಮಾನ ನಗರದಲ್ಲಿರುವ ವಿಠ್ಠಲರಾವ್ ಯಾಳಗಿ ಹಾಗೂ ೧೯೨೪ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ರೂವಾರಿ ಶ್ರೀಗಂಗಾಧರರಾವ್ ದೇಶಪಾಂಡೆ ಅವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಆಹ್ವಾನ ನೀಡಿದರು.
ಈ ಕುಟುಂಬದ ಸದಸ್ಯರಿಂದ ಸಚಿವ ಎಚ್.ಕೆ. ಪಾಟೀಲ ಅವರು ವಿವರವಾದ ಮಾಹಿತಿ ಪಡೆದುಕೊಂಡರು. ಅಸ್ಪೃಶತೆ ನಿವಾರಣೆಗೆ ಗಾಂಧೀಜಿ ಕರೆಕೊಟ್ಟ ಕಾಲಘಟ್ಟದಲ್ಲಿ ಬೆಳಗಾವಿ ಅಧಿವೇಶನ ನಡೆಯತ್ತಿತ್ತು. ನಮ್ಮ ಮನೆತನದವರು ಸ್ವಯಂ ಪ್ರೇರಿತರಾಗಿ ಭಂಗಿ ಬಳಿಯಲು ಮುಂದಾದರು. ಹೀಗಾಗಿ ಅವರು ಮುಂಚೂಣಿಯಲ್ಲಿ ಇರಲ್ಲಿಲ್ಲ. ಇದನ್ನು ಈಗ ಊಹಿಸಿಕೊಳ್ಳವದೂ ಕಷ್ಟ ಎಂದು ಅಣ್ಣೂ ಗುರೂಜೀ ಅವರ ಮೊಮ್ಮಗ ಮಹೇಶ ದೇಶಪಾಂಡೆ ಹೇಳಿದರು.
ನಮ್ಮೂರು ಹಾಗೂ ಸುತ್ತಮುತ್ತಲಿನ ಊರುಗಳ ಜನರು ಗಾಂಧೀಜೀಯಿAದ ಪ್ರೇರಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು ಎಂದು ನಮ್ಮಜ್ಜ ಹೇಳುತ್ತಿದ್ದರು. ನಾವೆಲ್ಲ ಅಜ್ಜನ ನೆರಳಿನಿಂದಲೇ ಬೆಳದವರು. ನಮ್ಮಜ್ಜ ತಲಾಠಿ ನೌಕರಿ ಬಿಟ್ಟು ಸ್ವಾತಂತ್ರ‍್ಯ ಚಳುವಳಿಗೆ ಧುಮುಕಿದರು. ನಾನು ಈ ಎಲ್ಲ ಮಾಹಿತಿ, ದಾಖಲೆ ಸಂಗ್ರಹಿಸಿರುವೆ ಎಂದರು.
ಇದು ಪುಸ್ತಕ ರೂಪದಲ್ಲಿ ಬರಬೇಕೆಂದು ಸಚಿವರು ದೇಶಪಾಂಡೆ ಅವರಿಗೆ ಸಲಹೆ ಮಾಡಿ, ಬೆಳಗಾವಿ ಅಧಿವೇಶನ ಕುರಿತು ಅಣ್ಣು ಗುರೂಜಿ ಬರೆದ ಕಿರು ಪುಸ್ತಕ ಮರು ಮುದ್ರಿಸಲು ಆದೇಶ ನೀಡಿದರು. ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಮಾಡಿದ ಹಾಗೂ ಹೋರಾಡಿದ ಯೋಧರನ್ನು ಮರೆಯಬಾರದು. ನೈಜವಾಗಿ ದುಡಿದವರ ಸೇವೆ ಸ್ಮರಿಸಬೇಕು ಇದು ನಮ್ಮ ಕರ್ತವ್ಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಮ್ಮ ಮನೆಯಲ್ಲಿ ೧೬ ಜನ ಜೈಲು ವಾಸ ಅನುಭವಿಸಿದ್ದಾರೆ. ೧೩ ಜನ ಸ್ವಾತಂತ್ರö್ಯಕ್ಕಾಗಿ, ೩ ಜನ ಗೋವಾ ವಿಮೋಚನೆಗಾಗಿ ಹೋರಾಡಿದ್ದಾರೆ. ಗಾಂಧೀಜಿ ಜೋತೆ ನಮ್ಮ ತಂದೆ ನಿಕಟ ಸಂಪರ್ಕ ಹೊಂದಿದ್ದರು. ಚಿಕ್ಕಪ್ಪ ಬೆಳಗಾವಿಯಲ್ಲಿ ಅಧಿವೇಶನವಾಗಬೇಕೆಂದು ಬಯಸಿದ್ದರು. ಆದರೆ ೧೯೨೩ರಲ್ಲಿ ತೀರಿಕೊಂಡರು. ಲೋಕಮಾನ್ಯ ಟಿಳಕರಿಂದ ಸ್ಪೂರ್ತಿ ಪಡೆದಿದ್ದರು. ಗಾಂಧೀಜಿ ಬೆಳಗಾವಿಗೆ ಭೇಟಿ ಕೊಟ್ಟಾಗಲೆಲ್ಲಾ ನಮ್ಮ ಮನೆತನ ಸೇವೆ ಸಲ್ಲಿಸಿದೆ ಎಂದು ವಿಠ್ಹಲರಾವ ಯಾಳಗಿ ಅವರು ಹೆಮ್ಮೆಯಿಂದ ಮೆಲಕು ಹಾಕಿದರು. ಸರ್ಕಾರ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ಸ್ಮರಿಸುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ. ಸರ್ಕಾರಕ್ಕೆ ಸ್ವಾತಂತ್ರ‍್ಯ ಯೋಧರ ಕುಂಟುಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು.
ಸ್ವಾತಂತ್ರ‍್ಯ ಯೋಧರ ಕುಟುಂಬದ ಸದಸ್ಯರು ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಲು ಸರ್ಕಾರದ ಪರವಾಗಿ ಸಚಿವ ಹೆಚ್.ಕೆ. ಪಾಟೀಲರು ಆಹ್ವಾನ ನೀಡಿದರು.
ನಂತರ ಸಚಿವ ಎಚ್.ಕೆ. ಪಾಟೀಲರು ಸುವರ್ಣಸೌಧಕ್ಕೆ ತೆರಳಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಸಿದ್ಧತೆಯನ್ನು ಪರಿಶಿಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತಿತರು ಹಾಜರಿದ್ದರು.
ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ನೀಡಿದ ಭೇಟಿ ಬಗ್ಗೆ ಸಚಿವರು ಸಂತಸ ವ್ಯಕ್ತಪಡಿಸಿ, ಈ ಕುಟುಂಬದ ಸದಸ್ಯರ ಜೊತೆ ಕೆಲ ಕ್ಷಣಗಳನ್ನು ಕಳೆದಿರುವುದು ಸಂತೋಷದ, ಹೆಮ್ಮೆಯ ಭಾವ ಮೂಡಿಸಿತು ಎಂದು ತಮ್ಮನ್ನು ಬೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.