ಕಾರವಾರ:- 10 ಸಾವಿರ ಪಿಗ್ಮಿ ಹಣಕ್ಕಾಗಿ ವೃದ್ದೆ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಿದ್ದಾಪುರ ನಗರದ ಬಸವನಗಲ್ಲಿಯಲ್ಲಿ ಜರುಗಿದೆ.
75 ವರ್ಷದ ಗೀತಾ ಹೂಂಡೆಕರ್ ಕೊಲೆಯಾದ ದುರ್ದೈವಿ. ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹೂಂಡೆಕರ್ ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ರೂಪಾಯಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರು. ಗೀತಾ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದು, ಇಬ್ಬರ ಮದುವೆ ಮಾಡಿಕೊಟ್ಟಿದ್ದು, ಪತಿ ಸಾವನಪ್ಪಿರುವ ಹಿನ್ನೆಲೆ ಕೆಲವು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಪಿಗ್ಮಿ ಸಂಹ್ರಹಿಸಿ ಮನೆಯ ಒಳಗೆ ಹೋದವಳು ಹೊರಗೆ ಬಂದಿರಲಿಲ್ಲ.
ಬಳಿಕ ಸ್ಥಳೀಯ ಮಾಹಿತಿ ಮೇರೆಗೆ ಮಗಳು ಮತ್ತು ಅಳಿಯ ಮನೆಗೆ ಆಗಮಿಸಿ ಮನೆಬಾಗಿಲು ಒಡೆದು ನೋಡಿದಾಗ ಕೊಲೆಯಾದ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ರಾತ್ರಿ ಹೊತ್ತು ಬಾತ್‌ರೂಂ ಮೇಲ್ಚಾವಣಿಯಿಂದ ಮನೆಗೆ ನುಗ್ಗಿ ಈಕೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನು ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.