ಬೆಳಗಾವಿ: ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ ಸೈನಿಕರ ಪಾರ್ಥಿವ ಶರೀರಗಳು ತವರಿಗೆ ತಲುಪಿದ್ದು, ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಯೋಧ ದಯಾನಂದ ತಿರಕಣ್ಣವರ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಯೋಧ ಮಹೇಶ ಮರಿಗೌಡರ ಈ ಇಬ್ಬರು ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಚಿವರಾದ ಎಚ್ ಸಿ ಮಹಾದೇವಪ್ಪ, ಶಾಸಕ ಸಿ ಎಸ್ ನಾಡಗೌಡ, ಅಶೋಕ ಪಟ್ಟಣ, ಡಿಸಿ ಮಹಮ್ಮದ್ ರೋಷನ್ ಕೂಡ ಇದ್ದರು. ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಮತ್ತು ಕರ್ನಲ್ ಅರ್ಪಿತ್ ತಾಪಾ ಸಮ್ಮುಖದಲ್ಲಿ ಸೇನಾ ಸಿಬ್ಬಂದಿಯಿಂದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಯೋಧ ದಯಾನಂದ ತಿರಕಣ್ಣವರ್ ಅವರ ಮೃತ ದೇಹಕ್ಕೆ ಪುತ್ರಿ ವೈಷ್ಣವ, ಪುತ್ರ ಗಣೇಶ್ ಗೌರವ ಸಲ್ಲಿಸಿದರು. ಉಡುಪಿಯ ಓರ್ವ ಯೋಧನ ಮೃತದೇಹವನ್ನು ಕುಂದಾಪುರದ ಅವರ ಹುಟ್ಟೂರಿಗೆ ರವಾನೆ ಮಾಡಲಾಗಿದೆ. ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.



