ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. ಹೀಗೆ ಹುಳುಕು ಹಿಡಿದಿರುವ ಹಲ್ಲಿಗೆ ಹುಳುಕು ಹಲ್ಲು ಎಂದು ಹೇಳುತ್ತಾರೆ. ಮಕ್ಕಳು ದೊಡ್ಡವರು ಎನ್ನದೇ ಇದು ಎಲ್ಲರನ್ನು ಒಂದೇ ರೀತಿಯಾಗಿ ಕಾಡುತ್ತದೆ. ಹಾಗೆಯೇ ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನಾದಿ ಕಾಲದಿಂದಲೂ ಇದೆ.
ಹಲ್ಲುಗಳಲ್ಲಿ ನೋವು ಕಂಡುಬಂದರೆ ಆಗ ಖಂಡಿತವಾಗಿಯೂ ಇಂತಹ ನೋವು ತನ್ನ ಶತ್ರುವಿಗೂ ಕೊಡದಿರು ದೇವರೇ ಎಂದು ಕೆಲವರಾದರೂ ಬೇಡಿಕೊಳ್ಳುವರು. ಹಲ್ಲುಗಳಲ್ಲಿ ನೋವು ಕಂಡುಬಂದರೆ ಆಗ ತಲೆ, ಮುಖ ಭಾಗವು ನೋವಿನಿಂದ ಕೂಡಿರುವುದು.
ಹೀಗಾಗಿ ದಂತ ನೋವು ಬಂದರೆ ನಮಗೆ ನೆನಪು ಆಗುವುದು ದಂತವೈದ್ಯರು. ಆದರೆ ಹಲ್ಲು ನೋವಿನ ಸಮಸ್ಯೆಗೆ ತಕ್ಷಣವೇ ವೈದ್ಯರ ಬಳಿಗೆ ಹೋಗುವ ಮೊದಲು ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ಇದರಲ್ಲಿ ನೋವು ಕಡಿಮೆ ಆಗುವುದು, ಒಂದು ವೇಳೆ ನೋವು ನಿಯಂತ್ರಣಕ್ಕೆ ಬರದೇ ಇದ್ದರೆ ಆಗ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಬೇಕು. ಮನೆಯಲ್ಲಿರುವಂತಹ ಕೆಲವೊಂದು ಮನೆಮದ್ದುಗಳನ್ನು ಹಲ್ಲು ನೋವಿಗೆ ಹೇಗೆ ಬಳಕೆ ಮಾಡಬಹುದು ಎಂದು ಈ ಕೆಳಗೆ ತಿಳಿಸಲಾಗಿದೆ ನೋಡಿ.
ಬೇವಿನ ಎಲೆಗಳು:-
ನಮಗೆಲ್ಲಾ ಗೊತ್ತೇ ಇರುವ ಹಾಗೆ, ರುಚಿಯಲ್ಲಿ ಕಹಿ ಎನ್ನುವ ಒಂದೇ ಅವಗುಣವನ್ನು ಬಿಟ್ಟರೆ, ಉಳಿದ ಎಲ್ಲಾ ವಿಷಯದ ಲ್ಲಿಯೂ ಕೂಡ ಬೇವು ಆರೋಗ್ಯವರ್ಧಕ ವಾಗಿದೆ. ಪ್ರಮುಖವಾಗಿ ಬೇವಿನಲ್ಲಿ ಕಂಡು ಬರುವ ಬ್ಯಾಕ್ಟೀರಿಯಾ ಹಾಗೂ ಉರಿಯೂತ ನಿವಾರಕ ಗುಣಲಕ್ಷಣಗಳು ಹಲ ವಾರು ಬಗೆಯ ರೋಗಗಳ ವಿರುದ್ಧ ಹೋರಾಡಲು ನೆರವಿಗೆ ಬರುತ್ತದೆ.
ಆರೋಗ್ಯ ತಜ್ಞರು ಹೇಳುವ ಹಾಗೆ, ಬೇವಿನಲ್ಲಿ ಬ್ಯಾಕ್ಟೀ ರಿಯಾ ಹಾಗೂ ಸೂಕ್ಷ್ಮ ಜೀವಿ ನಿರೋಧಕ ಗುಣಲಕ್ಷಣ ಗಳು, ಪ್ರಬಲ ಆಂಟಿಆಕ್ಸಿಡೆಂಟ್ ಅಂಶಗಳು, ಹಾಗೂ ವೈರಸ್ ನಿವಾರಕ ಗುಣ ಲಕ್ಷಣಗಳಿಂದ ತುಂಬಿರುವ ಬೇವಿನ ಎಲೆಗಳನ್ನು ಹಲ್ಲು ನೋವಿನ ಸಮಸ್ಯೆಯಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆಯ ರೂಪದಲ್ಲಿ ಬಳಸ ಲಾಗುತ್ತದೆ.
ಇಷ್ಟೆಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳನ್ನು ಒಳ ಗೊಂಡಿರುವ ಬೇವಿನ ಎಲೆಗಳನ್ನು, ಸ್ವಲ್ಪ ಜಗಿದು ತಿನ್ನ ಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ವೈರಸ್ ನಿವಾರಕ ಗುಣ ಲಕ್ಷಣಗಳಿಂದ ತುಂಬಿರುವ ಬೇವಿನ ಎಲೆಗಳು ಬಾಯಿಯ ದುರ್ವಾಸನೆಯನ್ನು ದೂರ ಮಾಡುವುದರ ಜೊತೆಗೆ ಹುಳುಕು ಹಲ್ಲಿನ ನೋವು ಅಥವಾ ವಸಡುಗಳ ತೊಂದರೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಲವಂಗ:-
ಲವಂಗದ ಎಣ್ಣೆ, ಲವಂಗದ ಹುಡಿ ಮತ್ತು ಇಡೀ ಲವಂಗವನ್ನು ಬಳಸಿಕೊಂಡು ಹಲ್ಲಿನ ನೋವು ಕಡಿಮೆ ಮಾಡಬಹುದು. ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಲವಂಗವು ಇದ್ದೇ ಇರುವುದು.
ಯುಜೆನಾಲ್ ಎನ್ನುವ ರಾಸಾಯನಿಕ ಅಂಶವು ಲವಂಗದಲ್ಲಿದ್ದು, ಇದು ನೈಸರ್ಗಿಕ ನಂಜುನಿರೋಧಕವಾಗಿ ಕೆಲಸ ಮಾಡುವುದು. ದಂತನೋವು ಕಡಿಮೆ ಮಾಡಲು ಲವಂಗವನ್ನು ವಿವಿಧ ರೀತಿಯಿಂದ ಬಳಕೆ ಮಾಡಬಹುದು. ಆದರೆ ಇದನ್ನು ಹಲ್ಲಿಗೆ ಸರಿಯಾಗಿ ಹಚ್ಚಬೇಕು. ಇಲ್ಲವಾದಲ್ಲಿ ತೊಂದರೆ ಹೆಚ್ಚಬಹುದು.
ಲವಂಗದ ಎಣ್ಣೆ ಬಳಕೆ ಮಾಡುತ್ತಲಿದ್ದರೆ, ಆಗ ಒಂದು ಹತ್ತಿ ಉಂಡೆಗೆ ಕೆಲವು ಹನಿ ಲವಂಗದ ಎಣ್ಣೆಯನ್ನು ಹಾಕಿಕೊಂಡು ಅದನ್ನು ನೋವು ನೀಡುತ್ತಲಿರುವ ಹಲ್ಲಿನ ಭಾಗಕ್ಕೆ ಇಟ್ಟುಬಿಡಿ. ಜೊಲ್ಲಿನ ಜತೆಗೆ ಮಸಾಲೆಯು ಸೇರಿಕೊಂಡು ನೋವು ದೂರವಾಗುವುದು. ಇಡೀ ಲವಂಗವನ್ನು ಹಲ್ಲಿನ ಮೇಲೆ ಇಟ್ಟುಕೊಂಡು ಹಾಗೆ ಅದನ್ನು ಜಗಿಯಿರಿ. ಇದನ್ನು ಹಾಗೆ 30 ನಿಮಿಷ ಕಾಲ ಹಲ್ಲಿನಲ್ಲಿಡಿ.
ಉಪ್ಪು ನೀರು:-
ಉಪ್ಪನ್ನು ಬಳಸಿಕೊಂಡು ದಂತನೋವನ್ನು ಕಡಿಮೆ ಮಾಡಬಹುದು. ಒಂದು ಕಪ್ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಮತ್ತು ಇದನ್ನು ಬಾಯಿಯಲ್ಲಿ 30 ಸೆಕೆಂಡುಗಳ ಕಾಲ ಮುಕ್ಕಳಿಸಿ.
ಉಪ್ಪು ನೀರು ನೋವು ಕಡಿಮೆ ಮಾಡುವುದು ಮತ್ತು ಊತ ಕಡಿಮೆ ಮಾಡುವುದು. ಹಲ್ಲಿಗೆ ಕಿರಿಕಿರಿ ಉಂಟು ಮಾಡುವ ಕಲ್ಮಷವನ್ನು ಇದು ಹೊರಗೆ ಹಾಕುವುದು.
ಬೆಳ್ಳುಳ್ಳಿ:-
ಬೆಳ್ಳುಳ್ಳಿಯನ್ನು ಬಳಸಿಕೊಂಡು ಹಲ್ಲಿನ ನೋವನ್ನು ಕಡಿಮೆ ಮಾಡಬಹುದು. ಇಡೀ ಬೆಳ್ಳುಳ್ಳಿಯನ್ನು ಹಲ್ಲಿನ ಮೇಲೆ ಇಡಬಹುದು ಅಥವಾ ಬೆಳ್ಳುಳ್ಳಿ ಕತ್ತರಿಸಿಕೊಂಡು ಅದನ್ನು ಹಲ್ಲಿನ ಭಾಗಕ್ಕೆ ಇಡಬಹುದು.
ಇಡೀ ಬೆಳ್ಳುಳ್ಳಿಯನ್ನು ಇಡುತ್ತಲಿದ್ದರೆ ಆಗ ಇದನ್ನು ನೇರವಾಗಿ ಹಲ್ಲಿನ ಮೇಲಿಡಿ ಮತ್ತು ಅದನ್ನು ಹಾಗೆ ಜಗಿಯಿರಿ. ಕತ್ತರಿಸಿಕೊಂಡ ಬೆಳ್ಳುಳ್ಳಿ ಬಳಸುತ್ತಿದ್ದರೆ ಆಗ ಅದನ್ನು ಹಲ್ಲಿನ ಮೇಲಿಡಿ.
ಜಜ್ಜಿಕೊಂಡ ಬೆಳ್ಳುಳ್ಳಿಯು ಅಲಿಸಿನ್ ಎನ್ನುವ ದ್ರವವನ್ನು ಬಿಡುಗಡೆ ಮಾಡುವುದು ಮತ್ತು ಇದು ನೈಸರ್ಗಿಕವಾಗಿ ರೋಗಗಳ ವಿರುದ್ಧ ಹೋರಾಡುವುದು. ಹೈಡ್ರೋಜನ್ ಪೆರಾಕ್ಸೈಡ್ ನಂತೆ ಅಲಿಸಿನ್ ಕೂಡ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿ. ಇದು ಒಳ್ಳೆಯ ರುಚಿ ನೀಡದೇ ಇದ್ದರೂ ನೋವು ನಿವಾರಣೆ ಮಾಡಲು ಸಹಕಾರಿ ಆಗುವುದು.
ಶುಂಠಿ ಮತ್ತು ಮೆಣಸಿನ ಪೇಸ್ಟ್:-
ಹಲ್ಲು ನೋವಿಗೆ ಅದ್ಭುತವಾಗಿ ಕೆಲಸ ಮಾಡುವಂತಹ ಮನೆಮದ್ದು ಎಂದರೆ ಅದು ಶುಂಠಿ ಮತ್ತು ಮೆಣಸು. ಇವುಗಳಲ್ಲಿ ಇರುವಂತಹ ಕೆಲವೊಂದು ಅಂಶಗಳಿಂದಾಗಿ ಅದು ನೋವು ನಿವಾರಣೆ ಮಾಡುವುದು. ಮೆಣಸಿನಲ್ಲಿ ಇರುವಂತಹ ಕ್ಯಾಪ್ಸೈಸಿನ್ ಎನ್ನುವ ಅಂಶವು ಮೆದುಳಿನ ನೋವಿನ ಸಂದೇಶವು ಹೋಗದಂತೆ ತಡೆಯುವುದು.
ಶುಂಠಿ ಮತ್ತು ಮೆಣಸನ್ನು ಸರಿಯಾದ ಪ್ರಮಾಣದಲ್ಲಿ ಹಾಕಿಕೊಂಡು ಪೇಸ್ಟ್ ಮಾಡಿ. ಇದರ ಬಳಿಕ ಅದನ್ನು ಹತ್ತಿ ಉಂಡೆಯಲ್ಲಿ ಅದ್ದಿಕೊಂಡು ಹಲ್ಲುಗಳ ಮೇಲಿಡಿ. ಇದನ್ನು ನೋವು ಕಡಿಮೆ ಆಗುವ ತನಕ ಹಾಗೆ ಬಿಡಿ.
ಪುದೀನಾ ಎಣ್ಣೆ:-
ಪುದೀನಾ ಸಾರಭೂತ ತೈಲವು ಹಲ್ಲುಗಳ ನೋವಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದು. ಮೆಂಥಾಲ್ ಅಂಶವು ಪುದೀನಾದಲ್ಲಿದ್ದು, ಇದು ನೋವು ನಿವಾರಕವಾಗಿ ಕೆಲಸ ಮಾಡುವುದು ಮತ್ತು ಇದನ್ನು ಹಲವಾರು ಉತ್ಪನ್ನಗಳಲ್ಲಿ ಕೂಡ ಬಳಕೆ ಮಾಡಲಾಗಿದೆ.
ಹಲ್ಲು ನೋವು ನಿವಾರಣೆ ಮಾಡಲು 10-15 ಹನಿಯಷ್ಟು ಪುದೀನಾ ಎಣ್ಣೆಯನ್ನು ಎರಡು ಚಮಚದಷ್ಟು ನೈಸರ್ಗಿಕ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಮಾಡಿರುವ ಪರಿಣಾಮವಾಗಿ ಅದು ಹಲ್ಲು ಮತ್ತು ಒಸಡಿಗೆ ಆಗುವಂತಹ ಹಾನಿ ತಪ್ಪಿಸುವುದು. ಒಂದು ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು ಹಲ್ಲುಗಳಿಗೆ ಹಚ್ಚಿ. ಆಗ ನೋವು ಕಡಿಮೆ ಆಗುತ್ತದೆ.
ಒಟ್ಟಾರೆ ಹಲ್ಲು ನೋವು ಜಾಸ್ತಿ ಆದರೆ ಒಂದು ಬಾರಿ ದಂತ ವೈದ್ಯರನ್ನು ಭೇಟಿ ಆಗುವುದು ಉತ್ತಮ.