ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಮಾಗಡಿ ವಿದೇಶಿ ವಲಸೆ ಪಕ್ಷಿಗಳ ತಾಣವಾಗಿರುವ ಸಂರಕ್ಷಿತ ಕೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ಪಕ್ಷಿಗಳು ಈಗಾಗಲೇ ಆಗಮಿಸಿವೆ. ಆದರೆ, ಈ ತಾಣದಲ್ಲಿ ಸ್ವಚ್ಛತೆಯೊಂದಿಗೆ ಸುರಕ್ಷತೆಯ ಕೊರತೆಯೂ ಎದ್ದು ಕಾಣುತ್ತಿದ್ದು, ಕೆರೆಯ ದಂಡೆಯಲ್ಲಿ ನಾಯಿಯೊಂದು ಪಕ್ಷಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.
ಮಾಗಡಿ ಕೆರೆಯ ದಂಡೆಯಲ್ಲಿ ನಾಯಿಯೊಂದು ವಿದೇಶಿ ಪಕ್ಷಿಯನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆರೆಯ ಸುತ್ತಲೂ ಸಾವಿರಾರು ಪಕ್ಷಿಗಳು ವಿಹರಿಸುತ್ತವೆ. ಜೊತೆಗೆ ಕೆರೆಯ ದಂಡೆಯಲ್ಲಿ ಕುಳಿತುಕೊಂಡು ಸಮಯ ಕಳೆಯುವುದು ಸಾಮಾನ್ಯ ದೃಶ್ಯ. ಕೆರೆಯ ಸುತ್ತಲೂ ಪಕ್ಷಿಗಳ ಸುರಕ್ಷತೆಗೆ ಆದ್ಯತೆ ನೀಡುವಲ್ಲಿ ಅರಣ್ಯ ಇಲಾಖೆಯು ವಿಫಲವಾಗುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಈ ಹಿಂದೆ ಕೋಟಿಗಟ್ಟಲೇ ಖರ್ಚು ಮಾಡಿ ಸಂರಕ್ಷಿತ ಕೆರೆ ಎಂದು ಗುರುತಿಸಿ, ಪಕ್ಷಿ ಪ್ರಿಯರಿಗೆ ಮತ್ತು ಪಕ್ಷಿಗಳು ವಲಸೆ ಬಂದು ವಾಸಿಸಲು ಅನುಕೂಲವಾಗುವುದಕ್ಕೆ ವಿಶಾಲವಾದ ಕೆರೆಯ ಸುತ್ತಲೂ ರಸ್ತೆಗೆ ಹೊಂದಿಕೊAಡAತೆ ಪೇವರ್ಸ್ ಮತ್ತು ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಆದರೆ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದಿದ್ದು, ಇಷ್ಟು ಖರ್ಚು ಮಾಡಿದ್ದಾದರೂ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಮೂಡಿದೆಯಲ್ಲದೆ, ಸಾರ್ವಜನಿಕರ ತೆರಿಗೆ ಹಣಕ್ಕೆ ಇಲ್ಲಿ ಬೆಲೆ ಇಲ್ಲವೇ ಎಂಬ ಸಂಶಯ ಕಾಡತೊಡಗಿದೆ.
ಕೆರೆಯ ಸುತ್ತಲೂ ಗಿಡಗಂಟಿಗಳ ಜೊತೆಗೆ ಎಲ್ಲೆಂದರಲ್ಲಿ ಗಲೀಜು ಮನೆ ಮಾಡಿದ್ದು, ಪಕ್ಷಿಗಳ ವೀಕ್ಷಣೆಗೆ ಆಗಮಿಸುವ ಪಕ್ಷಿ ಪ್ರಿಯರು ಮೂಗು ಮುಚ್ಚಿಕೊಂಡು ಪಕ್ಷಿ ವೀಕ್ಷಣೆ ಮಾಡಬೇಕಾದ ಅನಿವಾರ್ಯತೆಯಿದೆ. ಸರಕಾರ ಪಕ್ಷಿಗಳ ಹಿತದೃಷ್ಟಿಯಿಂದ ಕೆರೆಯನ್ನು ಸಂರಕ್ಷಿತ ಕೆರೆ ಎಂದು ಘೋಷಿಸಿ, ಸ್ವಚ್ಛತೆ ಇಲ್ಲದೇ ಹೋದರೆ ಹೇಗೆ, ಇದರ ನಿರ್ವಹಣೆಯ ಹೊಣೆ ಯಾರದ್ದು ಎಂಬುದಕ್ಕೆ ಸಂಬAಧಿಸಿದ ಇಲಾಖಾ ಅಧಿಕಾರಿಗಳೇ ಉತ್ತರಿಸಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ಸುಸ್ತಾಗಿ ಪಕ್ಷಿಯೊಂದು ಮೃತಪಟ್ಟಿದ್ದು, ಅದನ್ನು ನಾಯಿ ತಿನ್ನುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಷಯ ಇಲಾಖೆಯ ಗಮನಕ್ಕೆ ಬಂದಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು ಎಂದರು. ಮಾಗಡಿ ಗ್ರಾ.ಪಂ ಪಿಡಿಓ ಎಸ್.ವೈ. ಕುಂಬಾರ ಪ್ರತಿಕ್ರಿಯಿಸಿ, ಈ ವಾರದಲ್ಲಿ ಗ್ರಾ.ಪಂ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ರಮೇಶ ಕೋಳಿವಾಡ ಪ್ರತಿಕ್ರಿಯಿಸಿ, ಕೆರೆಯ ಸುತ್ತಲೂ ಸ್ವಚ್ಛತೆ ಇಲ್ಲ. ವಲಸೆ ಬರು ಪಕ್ಷಿಗಳಿಗೆ ಸುರಕ್ಷತೆಯೂ ಇಲ್ಲ. ಹೀಗಾಗಿ ನಾಯಿ-ನರಿಗಳಿಗೆ ಪಕ್ಷಿಗಳು ಆಹಾರವಾಗುತ್ತಿವೆ. ಜೊತೆಗೆ ಮಾಂಸಪ್ರಿಯರಿಗೂ ಸಹ ಆಹಾರವಾಗುತ್ತಿವೆ. ಅಧಿಕಾರಿಗಳ ನಿರ್ಲಕ್ಷö್ಯದಿಂದ ದುರ್ವಾಸನೆ ಬೀರುತ್ತಿದೆ. ಇಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ. ದೂರದಿಂದ ಆಗಮಿಸುವ ಪ್ರವಾಸಿಗರಿಗೆ ಇಲ್ಲಿ ಸರಿಯಾಗಿ ಗೈಡ್ ಮಾಡುವ ವ್ಯವಸ್ಥೆಯೂ ಸಹ ಇಲ್ಲ ಎಂದರು.