ವಿಜಯಸಾಕ್ಷಿ ಸುದ್ದಿ, ಬೆಳಗಾವಿ: ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ೧೯೨೪ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನನದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ವಿಶೇಷವಾಗಿ ರೂಪಿಸಿರುವ ಸರಸ್ ಮೇಳ ಮತ್ತು ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ವಿದ್ಯುಕ್ತ ಚಾಲನೆ ನೀಡಿದರು.
ಬೆಳಿಗ್ಗೆ ನಗರದ ಟಿಳಕವಾಡಿಯಲ್ಲಿನ ವೀರಸೌಧದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ನೇರವಾಗಿ ಸರ್ದಾರ್ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಇನ್ನಿತರ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಚಿವರಾದ ಎಚ್.ಕೆ. ಪಾಟೀಲ್, ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ, ಕೆ.ಎಚ್. ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ, ಡಾ. ಎಂ.ಸಿ. ಸುಧಾಕರ, ದಿನೇಶ್ ಗುಂಡೂರಾವ್, ಭೈರತಿ ಸುರೇಶ, ಶಾಸಕರಾದ ಆರ್.ವಿ. ದೇಶಪಾಂಡೆ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಲವಾರು ಗಣ್ಯರೊಂದಿಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬೆಳಗಾವಿ ನಗರದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ‘ಅಸ್ಮಿತೆ’ ವ್ಯಾಪಾರ ಮೇಳ-೨೦೨೪ನ್ನು ಉದ್ಘಾಟಿಸಿದರು.
ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿ ದಿನ ಸಂಜೆ ೬.೩೦ರಿಂದ ೯ ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಾವಿಯಲ್ಲಿ ಸತತ ೪ನೇ ವರ್ಷವೂ ಆಯೋಜಿಸಲಾಗುತ್ತಿರುವ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡುವುದು ವಿಶೇಷತೆಯಾಗಿದೆ. ಸರ್ಕಾರವು ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ೫೦ `ಅಕ್ಕ ಕೆಫೆ’ಗಳನ್ನು ಒಂದೇ ವಿನ್ಯಾಸದಡಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಅಂದಾಜು ೧೨೦೦ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.
ವಿಶೇಷ ಅಭಿಯಾನ
ರಾಜ್ಯದಲ್ಲಿ ಅಭಿಯಾನದಡಿ ೨.೭೯ ಲಕ್ಷ ಸ್ವ-ಸಹಾಯ ಗುಂಪುಗಳಡಿ ೨೯.೬೬ ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಲ್ಲಿ ಹಾಗೂ ೪೫ ಸಾವಿರ ಸ್ವ-ಸಹಾಯ ಗುಂಪುಗಳಡಿ ೪.೫೦ ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಸಂಘಟಿಸಲಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಸ್ಮಾವಲಂಬನೆಯ ಬದುಕಿನೊಂದಿಗೆ ತನ್ನ ಕುಟುಂಬದ ಅಭಿವೃದ್ಧಿಗೆ ಪೂರಕ ಸೇವೆಗಳನ್ನು ಪಡೆಯುವಲ್ಲಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ಉತ್ಪನ್ನಗಳಿಗೆ ಮಾರುಕಟ್ಟೆ
ರಾಜ್ಯದಲ್ಲಿ ಮಹಿಳೆಯರು ಉತ್ಪನ್ನಗಳ ಮಾರಾಟಕ್ಕೆ ಪ್ರತಿಯೊಂದು ಹಳ್ಳಿ, ಸಂತೆ, ತಾಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಏರ್ಪಡಿಸುವುದಷ್ಟೇ ಅಲ್ಲದೆ ಇತರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳಿಗೆ ರಾಜ್ಯದ ಮಹಿಳೆಯರನ್ನು ನಿಯೋಜನೆ ಮಾಡುವ ಮೂಲಕ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಕಳೆದ ೩ ವರ್ಷದಿಂದ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದಂತೆ ಈ ವರ್ಷವೂ ಸಹ ಮೇಳ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ. ವಿದ್ಯಾ ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಈ ಉತ್ಸವವು ಆರಂಭವಾಗಿದ್ದು, ಡಿ.೨೬ರಿಂದ ಜನವರಿ ೪ರವರೆಗೆ ನಡೆಯಲಿದೆ.