ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೈಕಿ ಗುರುವಾರ ಇಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಶುಕ್ರವಾರ ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿ ಕೊನೆಯುಸಿರೆಳೆದಿದ್ದರು. ಇದೀಗ ಇಂದು ಮತ್ತೊಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಚಿಕಿತ್ಸೆ ಫಲಿಸದೆ ಶಂಕರ್ ಚವಾಣ್ (29) ಎಂಬ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ. ಚಿಕ್ಕವನಿದ್ದಾಗಲೇ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಶಂಕರ್ ಅವರು ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ಇದೆ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ್ದ ಶಂಕರ್ ಸೋಮವಾರ ನಡೆದ ಸಿಲಿಂಡರ್ ಬ್ಲಾಸ್ಟ್ನಿಂದ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಕೊನೆಯುಸಿರೆಳೆದಿದ್ದಾರೆ.
ಉಣಕಲ್ ಹತ್ತಿರದ ಸಾಯಿ ನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು ಒಟ್ಟು 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲರಿಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಒಟ್ಟು ಐವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.