ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯು ಒಂದೊಮ್ಮೆ ಅತ್ಯುತ್ತಮ ನಗರಸಭೆ ಎಂದು ಬಿರುದು ಪಡೆದಿತ್ತು. ಆದರೆ ಇಂದಿನ ಆಡಳಿತ ವ್ಯವಸ್ಥೆಯನ್ನು ನೋಡಿದರೆ ನಗರಸಭೆಯಲ್ಲಿ ಖಾಸಗಿ ವ್ಯಕ್ತಿಗಳ ಕಾರುಬಾರು ಹೆಚ್ಚಿದೆ ಎಂದು ಮುಖಂಡರಾದ ಸತೀಶ ಎಚ್. ಹೂಲಿ ಖಂಡಿಸಿದ್ದಾರೆ.
ನಗರಸಭೆಯಲ್ಲಿ ಬಹುಪಾಲು ಹೊರಗುತ್ತಿಗೆ ಆಧಾರದ ಮೇಲಿರುವ ವ್ಯಕ್ತಿಗಳು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅವಳಿ ನಗರದ 35 ವಾರ್ಡ್ಗಳಲ್ಲಿ ಬರುವ ಸಾರ್ವಜನಿಕರ ಆಸ್ತಿ ಮತ್ತು ನೀರಿನ ಕರವನ್ನು ವಸೂಲಿ ಮಾಡಲು ನೌಕರರು ಬೇಕಾಗುವುದು 35 ಜನ. ಆದರೆ ಖಾಯಂ ನೌಕರರು 6 ಜನ ಮಾತ್ರ. ಅಲ್ಲಿ ಕೂಡ ಖಾಸಗಿ ವ್ಯಕ್ತಿಗಳು ತಮ್ಮ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ಪಿ.ಡಬ್ಲೂಯ.ಡಿ. ವಿಭಾಗದಲ್ಲಿಯೂ ಸುಮಾರು 8 ಜನ ಖಾಸಗಿ ವ್ಯಕ್ತಿಗಳು ಇಲಾಖೆಯ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಒಂದು ವರ್ಷದಿಂದ ಗದಗ-ಬೆಟಗೇರಿ ನಗರಸಭೆಗೆ ಖಾಯಂ ಪೌರಾಯುಕ್ತರು ಇಲ್ಲದಿರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದ್ದು, ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.