ಹಾವೇರಿ:- ಜಿಲ್ಲೆಯ ಶಿಗ್ಗಾವಿ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ್ ದಬ್ಬಾಳಿಕೆಗೆ ಬಡ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಶಾಂತವ್ವ ಗಡ್ಡಿ ಎಂಬ ಬಡ ಮಹಿಳೆಯ ಕುಟುಂಬವು ಶಿಗ್ಗಾವಿ ಪಟ್ಟಣದ ಗಂಜಿಗಟ್ಟಿ ರಸ್ತೆಯಲ್ಲಿರುವ ಜಿ ಪ್ಲಸ್ 1 ಮನೆ ನಂಬರ್ 94 ರಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಪೊಲೀಸ್ ಸಿಬ್ಬಂದಿಯೊಡನೆ ಬಂದ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ ಮನೆ ಖಾಲಿ ಮಾಡುವಂತೆ ಅವಾಚ್ಯವಾಗಿ ನಿಂದಿಸಿದ್ದಾರೆ.
ಅಲ್ಲದೇ ಮನೆಯ ಒಡತಿ ಶಾಂತವ್ವಳಿಗೆ ಏಕವಚನದಲ್ಲಿ ಬೈದು ಮನೆಯ ಪೀಠೋಪಕರಣಗಳನ್ನು ಹೊರ ಹಾಕಿದ್ದಾರೆ. ನಿಮಗೆ ಮನೆ ಮಂಜೂರೇ ಆಗಿಲ್ಲ, ಸಂಸಾರ ಮಾಡೋಕೆ ಬಂದಿದ್ದಾಳೆ, ಮಲಗೋಕೆ ಬಂದಿದಾಳೆ ಅಂತ ಚೀಫ್ ಆಫೀಸರ್ ಓರ್ವ ಮಹಿಳೆಗೆ ಹೀನಾಯವಾಗಿ ಮಾತನಾಡಿದ್ದಾರೆ ಎಂದು ಕುಟುಂಬದವರ ಆರೋಪವಾಗಿದೆ. ಈ ಮಾತು ಕೇಳಿದ ಶಾಂತವ್ವ, ಗಳಗಳನೆ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೇ ರಾತ್ರಿಯಿಡೀ ಚಳಿಯಲ್ಲೇ ನಡುಗುತ್ತಾ ಮನೆಯ ಹೊರಗೆ ಬಡ ಕುಟುಂಬ ಕುಳಿತಿರುವ ದೃಶ್ಯ ಮನಕಲಕುವಂತಿತ್ತು. ಮನೆಯಲ್ಲಿ ಇದ್ದ 75 ವರ್ಷದ ವಯೋವೃದ್ದೆ ನೀಲವ್ವ ಹಾಗೂ ರೇಣವ್ವ ಎಂಬುವವರನ್ನೂ ಸಹ ಅಧಿಕಾರಿಗಳು ಮಾನವೀಯತೆ ಮರೆತು ಹೊರ ಹಾಕಿದ್ದಾರೆ. ತಮ್ಮ ತಾಯಿ ವಯಸ್ಸಿನ ವಯೋವೃದ್ದೆಯರನ್ನೂ ಬಿಡದೇ ನಿರ್ದಯಿ ಆಫೀಸರ್ಸ್ ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಬಡ ಕುಟುಂಬ ಆರೋಪಿಸಿದೆ.
ಇನ್ನೂ ಹಾವೇರಿಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡ್ತಿರೋ ಶಾಂತವ್ವನ ಮಗಳು, ಪ್ರಿಯಾಂಕ ರಾತ್ರಿಯಿಡೀ ಬೀದಿ ಬೆಳಕಲ್ಲೇ ಓದಿಕೊಂಡಿದ್ದು, ಎಂತಹ ಕಟು ಹೃದಯಿಗಳನ್ನು ಕರಗುವಂತೆ ಮಾಡಿತ್ತು.
ಘಟನೆ ಹಿನ್ನಲೆ:
ಶಿಗ್ಗಾವಿ ಪುರಸಭೆ ಕಾರ್ಯಾಲಯವು, ಜಿ ಪ್ಲಸ್ 1 ಯೋಜನೆಯಡಿ ನಂಬರ್ 4 ಮನೆಯನ್ನು ತಾತ್ಕಾಲಿಕ ಆಯ್ಕೆ ಪಟ್ಟಿ ಪತ್ರ ಕೊಟ್ಟು ಮಂಜೂರು ಮಾಡಿತ್ತು.
ಬಳಿಕ ಸಿಖ್ ಸಮುದಾಯದ ಕೆಲವರಿಗೆ ಮನೆ ಕೊಡಬೇಕು. ನಿಮಗೆ ವ್ಯವಸ್ಥಿತವಾದ ಇನ್ನೊಂದು ಜಿ ಪ್ಲಸ್ 1 ಮನೆ ಕೊಡಿಸುವುದಾಗಿ ಭರವಸೆ ನೀಡಿ ಮನೆ ವಾಪಾಸ್ ಪಡೆದಿದ್ದರು.
ಬಳಿಕ ಶಿಗ್ಗಾವಿ ಪಟ್ಟಣದಲ್ಲಿ ಮನೆ ಬಾಡಿಗೆ ಪಡೆದು ಕುಟುಂಬ ವಾಸವಿತ್ತು. ಪ್ರತಿ ತಿಂಗಳು 3 ಸಾವಿರ ರೂಪಾಯಿ ಬಾಡಿಗೆ ಕಟ್ಟಿ ಶಾಂತವ್ವ ಕುಟುಂಬ ವಾಸವಿತ್ತು. ಬಳಿಕ ಪ್ರತಿ ತಿಂಗಳು ಬಾಡಿಗೆ ಕಟ್ಟೋದು ಹೊರೆಯಾದ ಹಿನ್ನಲೆಯಲ್ಲಿ ಪುರಸಭೆಗೆ ಮನೆ ಮರು ಮಂಜೂರಾತಿ ಮಾಡುವಂತೆ ಹಲವು ಬಾರಿ ಶಾಂತವ್ವ ಕುಟುಂಬ ಮನವಿ ಮಾಡಿತ್ತು. ಆದರೆ ಮನೆ ವಿತರಣೆ ಆಗದ ಹಿನ್ನಲೆಯಲ್ಲಿ ತಿಂಗಳ ಬಾಡಿಗೆ ಕಟ್ಟಲಾರದೇ ಅನಿವಾರ್ಯವಾಗಿ G + 1 ಮನೆ ನಂಬರ್ 94 ರ ಬೀಗ ಒಡೆದು ಕುಟುಂಬ ವಾಸವಿತ್ತು.
ಆದರೆ ವಿಷಯ ತಿಳಿದು ಏಕಾಏಕಿ ಬಂದ ಅಧಿಕಾರಿಗಳು, ಶಾಂತವ್ವ ಗಡ್ಡಿ ಕುಟುಂಬವನ್ನು ಹೊರ ಹಾಕಿ ದರ್ಪ ತೋರಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಮುಖ್ಯಾಧಿಕಾರಿ ಮಲ್ಲೇಶ್ ಆರೋಪ ನಿರಾಕರಿಸಿದ್ದಾರೆ.