ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಾ. ಬಿ.ಎಫ್. ದಂಡಿನ ಸಂಸ್ಥಾಪಕ ವಿದ್ಯಾಸಂಸ್ಥೆಯ ಕೆ.ಎಸ್.ಎಸ್ ಕಾಲೇಜ್‌ನಲ್ಲಿ ಸಂವಿಧಾನ ಸಮ್ಮಾನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಗರಾಜ ಕುಲಕರ್ಣಿ ಪಾಲ್ಗೊಂಡು ಮಾತನಾಡಿ, ಭಾರತದ ಸಂವಿಧಾನ ಇತ್ತೀಚಿನ ದಿನಗಳಲ್ಲಿ ಪಂಚಾಯತ್‌ಗಳಿಂದ ಪಾರ್ಲಿಮೆಂಟ್‌ವರೆಗೆ ಹೆಚ್ಚು ಚರ್ಚೆಯ ವಿಷಯವಾಗಿದೆ. ಕಳೆದ ವಿಧಾನಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಭಾಧ್ಯಕ್ಷರಿದ್ದಾಗ ಸಂವಿಧಾನದ ಕುರಿತಾದ ದೀರ್ಘವಾದ ಚರ್ಚೆ ಆಗಿದ್ದನ್ನು ನಾವು ನೋಡಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅತ್ಯಂತ ಅಧ್ಯಯನಪೂರ್ಣವಾದ ಮಾನವಿ ಮೌಲ್ಯಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಹಾಗಾಗಿ ಅಂಬೇಡ್ಕರರ ಚಿಂತನೆ ಹಾಗೂ ನಡೆದುಬಂದ ದಾರಿಯನ್ನು ಇಂದಿನ ಪೀಳಿಗೆ ಅಧ್ಯಯನ ಮಾಡುವುದರಿಂದ ಅಂಬೇಡ್ಕರರ ನಿಜವಾದ ಜೀವನದ ಘಟನಾವಳಿಗಳನ್ನು ತಿಳಿಯಲು ಸಾಧ್ಯ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದ ಆಶಯಕ್ಕೆ ಭಂಗ ತರುವ ಕೆಲಸವನ್ನು ಮಾಡಿದೆ ಎಂದರು.
ರಮೇಶ ಸಜ್ಜಗಾರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು 32 ಪದವಿಯನ್ನು ಪಡೆದು ಅಂದಿನ ಕಾಲದ ವಿಶ್ವದ ಶ್ರೇಷ್ಠ ಜ್ಞಾನವಂತರಲ್ಲಿ ಒಬ್ಬರಾಗಿದ್ದರು. ಆದರೆ ಅವರನ್ನು ನೆಹರು ಕಾಲದಲ್ಲಿ ಚುನಾವಣೆಯ ಸ್ಪರ್ಧೆಯಲ್ಲಿ ಅವರ ವಿರುದ್ಧ ಅವರ ಆಪ್ತ ಸಹಾಯಕನಿಂದಲೇ ಕಾಂಗ್ರೆಸ್ ಸೋಲಿಸಿತು. ಅಂಬೇಡ್ಕರರಿಗೆ ಭಾರತರತ್ನ ಪ್ರಶಸ್ತಿ ನೀಡಲು ಕಾಂಗ್ರೆಸೇತರ ಸರ್ಕಾರ ಬರಬೇಕಾಯಿತು. ಹೀಗಾಗಿ ಅಂಬೇಡ್ಕರ್ ಸಾಗಿ ಬಂದ ನಿಜವಾದ ದಾರಿಯನ್ನು ನಾವು ಅಧ್ಯಯನ ಮಾಡಿದರೆ ಅಂಬೇಡ್ಕರರ ವಾಸ್ತವ ಬದುಕು ನಮಗೆ ಪ್ರೇರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಕಮಲಾಕ್ಷೀ ಅಂಗಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಿನ್ಸಿಪಾಲರಾದ ಡಿ.ಬಿ. ಗವಾನಿ, ಉಮೇಶ ಹಿರೇಮಠ, ಉಪನ್ಯಾಸಕರಾದ ಸತೀಶ ಪಾಸಿ, ಸಿಬ್ಬಂದಿವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.