ವಿಜಯಸಾಕ್ಷಿ ಸುದ್ದಿ, ಕೊಪ್ಪಳ: 2025ರ ಜನೇವರಿ 15ರಂದು ಜರುಗಲಿರುವ ಶ್ರೀ ಗವಿಮಠದ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಮುಂಭಾಗದಲ್ಲಿನ ಆವರಣದಲ್ಲಿ ಸುಮಾರು 22 ಎಕರೆ ವಿಸ್ತೀರ್ಣವುಳ್ಳ, 900ರಿಂದ 1000 ಅಂಗಡಿಗಳಿಗೆ ವ್ಯವಸ್ಥೆ ಕಲ್ಪಿಸುವ ಜಾತ್ರಾ ಹಾಗೂ ಮಹಾರಥೋತ್ಸವ ಆವರಣದ ಸ್ವಚ್ಛತಾ ಕಾರ್ಯಗಳೆಲ್ಲವು ಮುಗಿದು ಸಂಪೂರ್ಣವಾಗಿ ಸಿದ್ಧಗೊಂಡಿದೆ.
ಈ ಬೃಹತ್ ಸ್ವಾಗತ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿಯನ್ನು ಕಲ್ಪಿಸಲಾಗಿದ್ದು, ಈ ವಿಶಾಲವಾದ ಆವರಣದಲ್ಲಿ ಪ್ರತಿವರ್ಷ ಜಾತ್ರಾ ಮಳಿಗೆಗಳನ್ನು ಹಾಕಲಾಗುತ್ತದೆ. ಪ್ರತಿ ಸಾಲುಗಳ ಮಧ್ಯ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಸಾಲಿನಲ್ಲಿರುವ ಅಂಗಡಿಗಳು ಶಿಸ್ತಿನಿಂದ ಸಾಲಾಗಿ ಹಾಕಲಾಗುವುದರಿಂದ ಅವುಗಳ ಶಿಸ್ತು ಸಹ ಜಾತ್ರಾ ಆಕರ್ಷಣೆಗಳಲ್ಲಿ ಒಂದಾಗಿದೆ.
ಅಲ್ಲದೇ ಜಾತ್ರಾ ಮಹೋತ್ಸವದ ಅಂಗಡಿಗಳ ಆವರಣಗಳಲ್ಲಿ ಮಹಾರಥೋತ್ಸವದಿಂದ ಹಿಡಿದು ಅಮವಾಸ್ಯೆಯವರೆಗೆ ಜನಸಂದಣಿ ಕೂಡುತ್ತದೆ. ಮಹಿಳೆಯರ, ಮಕ್ಕಳ, ವಯೋವೃದ್ಧರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರದ ಆಭರಣಗಳು, ಮೊಬೈಲ್ ಕಳ್ಳತನ ಮಾಡುವ ಕಳ್ಳಕಾಕರನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾತ್ರೆಯನ್ನು ಶಿಸ್ತಿನಿಂದ ನೆರವೇರಿಸಲು ಅಲ್ಲಲ್ಲಿ ಸಿ.ಸಿ. ಕ್ಯಾಮರಾಗಳನ್ನು ಸಹ ಅಳವಡಿಸಲಾಗಿರುತ್ತದೆ. ಓ.ಪಿ.ಡಿ ಚಿಕಿತ್ಸಾ ಕೇಂದ್ರಗಳು ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಆವರಣದಲ್ಲಿ ತೆರೆಯಲಾಗುತ್ತದೆ.
ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಪೂರ್ವಭಾವಿಯಾಗಿ ಶ್ರೀ ಮಠವು ಜಾತ್ರಾ ಮಳಿಗೆಗಳ ಸನಿಹದಲ್ಲಿಯೇ ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ವ್ಯಾಪಾರ ಮತ್ತು ಮನೋರಂಜನೆಯ ಅಂಗಡಿಗಳು ಅವರಣದಲ್ಲಿ ಎದ್ದು ನಿಲ್ಲಲಿವೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.