ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಾ ಹೀ ಪರಮೋ ಧರ್ಮ, ಸ್ವಾರ್ಥಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಎಲ್ಲವೂ ಎನ್ನುವ ನಿಸ್ವಾರ್ಥ ಸೇವೆಯಿಂದ ಜೀವನದ ಸಂತೃಪ್ತಿ, ಮುಕ್ತಿ ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರತಿಷ್ಠಾನದ ನಿರ್ದೇಶಕ ಸುರೇಶ ಜಿ ಹೇಳಿದರು.
ಅವರು ಮಂಗಳವಾರ ಲಕ್ಮೇಶ್ವರದ ಶಂಕರಭಾರತಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಸೇವಾಮಿತ್ರ ಯೋಜನೆ ಲಕ್ಮೇಶ್ವರದ ತಾಲೂಕು ಘಟಕದಿಂದ ಸೇವಾ ದಿನದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೈಯುತ್ತಿರುವ ಮಹನೀಯರಿಗೆ `ಸೇವಾಕಿರಣ’ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಷ್ಠಾನದಿಂದ ನಡೆಯುವ ಉಚಿತ ಹೊಲಿಗೆ ಹಾಗೂ ಕಸೂತಿ ತರಬೇತಿ ಪಡೆದ 260 ತಾಯಂದಿರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯ ಸಮಾಜ ಜೀವಿಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿ ತಾನು ಧರ್ಮ ಮಾರ್ಗದಿ ಸಂಪಾದಿಸಿದ ಆದಾಯದಲ್ಲಿ ಒಂದಷ್ಟು ಸಮಾಜ ಸೇವೆಗೆ ಮೀಸಲಾಗಿಸಬೇಕು. ದಾನ, ಧರ್ಮ, ತ್ಯಾಗ, ಕರುಣೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಇಂತಹ ಮಾನವೀಯ ಗುಣಗಳನ್ನು ಮಕ್ಕಳಲ್ಲಿ ಬಿತ್ತುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾಮಿತ್ರ ಯೋಜನೆಯ ರಾಜ್ಯ ಸಂಯೋಜಕ ನಟರಾಜ ರಾನಡೆ ಪ್ರತಿಷ್ಠಾನದ ಸ್ಥಾಪಕರಾದ ದಿ. ಅಜಿತ ಕುಮಾರ ಅವರ ನೆನಪಿಗಾಗಿ ಪ್ರತೀ ವರ್ಷ ಸೇವಾದಿನ ಆಚರಿಸಲಾಗುತ್ತದೆ ಎಂದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈಯುತ್ತಿರುವ ಜಗದೀಶ ಸಂತಿ, ಚನ್ನಪ್ಪ ಚಿಂಚಲಿ, ಚನ್ನಪ್ಪ ಶಿರಹಟ್ಟಿ, ಅಮಿತ ಹಾಲೇವಾಡಿಮಠ, ಅನಿಲ ಬೆಲ್ಲದ, ಹನಮಂತಪ್ಪ ಚಿಂಚಲಿ, ವಿಜಯ ಕೋಪರ್ಡೆ, ಸರೋಜಮ್ಮ ಬನ್ನೂರ ಅವರನ್ನು ಸನ್ಮಾನಿಸಲಾಯಿತು. ಹೊಲಿಗೆ ಹಾಗೂ ಕಸೂತಿ ತರಬೇತಿ ಪಡೆದ 260 ಫಲಾನುಭವಿಗಳು ಇದ್ದರು. ಶಂಕರ ಬ್ಯಾಡಗಿ, ಅಭಿಷೇಕ ಉಮಚಗಿ, ಚೇತನ ಯಲಿಗಾರ, ಚಂದ್ರು ಕುಂದಗೋಳ, ನವೀನ ಬಡಿಗೇರ ನಿರ್ವಹಿಸಿದರು.