ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮಾಜಮುಖಿ ಕಾರ್ಯದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಕುರಿತು ಪ್ರತಿ ಶಿವಾನುಭವದಲ್ಲಿ ಉಪನ್ಯಾಸ ನಡೆಯುತ್ತವೆ. ಈ ದಿಸೆಯಲ್ಲಿ ಸಾಧಕರ ಸಾಧನೆಯ ವಿಷಯಗಳನ್ನು ಕೇಂದ್ರೀಕರಿಸಿ ಯುವಕರು, ಭಕ್ತರು ಸಾಧನೆಯ ಹಾದಿ ಹಿಡಿಯಬೇಕು ಎಂದು ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಲಹೆ ನೀಡಿದರು.
ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ 304ನೇ ಶೀವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಿರಂತರವಾಗಿ ನಡೆದು ಬಂದಿರುವ ಶಿವಾನುಭವ ಕಾರ್ಯಕ್ರಮ ಇಂದು 304ನೇ ಸಂಚಿಕೆ ನಡೆಯುತ್ತಿರುವುದು ಸಂತಸ ತಂದಿದೆ. ಪ್ರತಿ ಶಿವಾನುಭವ ಕಾರ್ಯಕ್ರಮದಲ್ಲಿ ಶಿಕ್ಷಣ, ಕೃಷಿ, ಸಂಗೀತ, ಕ್ರೀಡೆ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗಿದ್ದು, ಭಕ್ತರ ನಿಸ್ವಾರ್ಥ ಸೇವಾ ಮನೋಭಾವನೆ ಮೆಚ್ಚುವಂತದ್ದು ಎಂದರು.
ಗ್ರಾ.ಪಂ ಸದಸ್ಯ ಶಿವಾನಂದ ಪಟ್ಟೇದ ಮಾತನಾಡಿ, ಶ್ರೀ ಮಠದ ಕೊಟ್ಟೂರೇಶ್ವರ ಸ್ವಾಮೀಜಿಗಳ ಸಮಾಜಮುಖಿ ಕಾರ್ಯದಿಂದ ಗ್ರಾಮವು ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ. ಶ್ರೀ ಮಠದಿಂದ ಶಿಕ್ಷಣ ಸಂಸ್ಥೆಯು ಆರಂಭಿಸುವ ಇಚ್ಛೆಯನ್ನು ಶ್ರೀಗಳು ಹೊಂದಿದ್ದಾರೆ. ಪ್ರತಿದಿನ ಶ್ರೀಮಠದಲ್ಲಿ ಅನ್ನ ದಾಸೋಹ ನಡೆಯಬೇಕಾಗಿದ್ದು, ನಾವೆಲ್ಲರೂ ಸಹಾಯ-ಸಹಕಾರ ನೀಡಿ ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹೇಶ ಕುಂಬಾರ, ಸೋಮಣ್ಣ ಬಾಲಬಸವರ, ಶೇಕಪ್ಪ ಪೂಜಾರ, ಶಿವಾನಂದ ಮುಂಡರಗಿ, ಮಹಾದೇವಪ್ಪ ಲಕ್ಕುಂಡಿ, ಉಪಸ್ಥಿತರಿದ್ದರು. ಕೆ.ಬಿ. ವೀರಾಪೂರ ಸಂಗೀತ ಸೇವೆ ನೀಡಿದರು. ವೆಂಕಟೇಶ ಜುಂಜಣಿ ನಮ್ಮೂರ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಖರ್ಚು ವೆಚ್ಚದ ಕುರಿತು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು.