ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎಲ್ಲಾ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಗಂಗಣ್ಣ ಕೋಟಿಯವರು ತಮ್ಮ ಸಕ್ರಿಯವಾದ ಸೇವೆಯನ್ನು ಸಲ್ಲಿಸುತ್ತಿದ್ದರು. ತೋಂಟದಾರ್ಯ ಮಠದ ಇತಿಹಾಸವನ್ನು ಬರೆದವರೇ ಕೋಟಿ ಮನೆತನದವರು. ತೋಂಟದಾರ್ಯ ಮಠಕ್ಕೂ, ಕೋಟಿ ಮನೆತನಕ್ಕೂ ಅವಿನಾಭವ ಸಂಬಂಧ ಇದೆ. ಗಂಗಣ್ಣ ಕೋಟಿಯವರು ಮನೆಗೆ ಮಲ್ಲಿಗೆಯಾಗಿ ಸಮಾಜಕ್ಕೆ ಉಪಕಾರಿಯಾಗಿ ಬಾಳಿದವರು ಎಂದು ತೋಂಟದಾರ್ಯ ಸಂಸ್ಥಾನಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅಕ್ಕನ ಬಳಗದಲ್ಲಿ ನಡೆದ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಗಂಗಣ್ಣ ಕೋಟಿಯವರ ಕುರಿತು ಅಭಿಮಾನದ ಆಶೀರ್ವಚನ ನೀಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಎಸ್.ಬಿ. ಶೆಟ್ಟರ ಮಾತನಾಡುತ್ತ, ಗಂಗಣ್ಣ ಕೋಟಿ ಅವರದು ತ್ಯಾಗಮಯ ಜೀವನ. ಚಿಕ್ಕಂದಿನಲ್ಲಿ ಕಷ್ಟದ ದಿನಗಳನ್ನು ಎದುರಿಸಿದ ಅವರು ಹೋರಾಟದ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು. ತಮ್ಮ ಜೀವನವನ್ನೇ ಕುಟುಂಬಕ್ಕಾಗಿ, ಸಮಾಜಕ್ಕಾಗಿ ಸಮರ್ಪಿಸಿಕೊಂಡವರು. ಅವರು ಸಮಾಜಕ್ಕೆ ನೀಡುತ್ತಾ, ಕೊಟ್ಟಿದ್ದನ್ನು ಮರೆತರು. ನ್ಯಾಯ ನಿಷ್ಠುರವಾದ ನಿಷ್ಕಾಮ ಕರ್ಮಯೋಗಿಗಳಾಗಿದ್ದರು. ತುಂಬು ಕುಟುಂಬದಲ್ಲಿ ಇಬ್ಬರು ದಂಪತಿಗಳು, ತಮ್ಮ ಜೀವನವನ್ನು ಕಳೆದರು. ಮಕ್ಕಳಿಲ್ಲದಿದ್ದರೂ ಇರುವವರೆನೆಲ್ಲ ತಮ್ಮ ಮಕ್ಕಳೆಂದು ತಿಳಿದು ಬಾಳಿದವರು. ಈಗಿನ ಕಾಲದ ಮಕ್ಕಳನ್ನು ಚಿಕ್ಕಂದಿನಲ್ಲಿ ದೂರ ಇಟ್ಟು ವಿದ್ಯಾಭ್ಯಾಸ ಕಲಿಸಿ, ಜೀವನ ನಿರ್ವಹಣೆಗೆಂದು ಮಕ್ಕಳು ವಿದೇಶಕ್ಕೆ ಹೋದಾಗ, ಪರದೇಶಿಗಳಾಗಿ ಬಾಳುವವರ ಸಂಖ್ಯೆಯೇ ಹೆಚ್ಚು ಎಂದರು.
ಅಧ್ಯಕ್ಷರಾದ ಲಲಿತಾ ವಿ.ಬಾಳಿಹಳ್ಳಿಮಠ ಸ್ವಾಗತಿಸಿದರು. ರಾಜೇಶ್ವರ ಶೆಟ್ಟರ್, ಪಾರ್ವತಿ ಮಾಳೆಕೊಪ್ಪಮಠ ಪ್ರಾರ್ಥಿಸಿದರು. ಅನುಪಮಾ ಜೋಳದ ನಿರೂಪಿಸಿದರು. ವೇದಿಕೆಯ ಮೇಲೆ ಸುಶೀಲಾ ಕೋಟಿ, ಅನ್ನಪೂರ್ಣ ಮಾಳೆಕೊಪ್ಪಮಠ ಉಪಸ್ಥಿತರಿದ್ದರು. ಶಾರದಾ ಹಿರೇಮಠ, ವೀಣಾ ಕೋಟಿ, ಸುರೇಖಾ ಪಿಳ್ಳಿ ಅಭಿಪ್ರಾಯ ಹಂಚಿಕೊAಡರು. ಕಾರ್ಯಕ್ರಮದ ರೂವಾರಿಗಳಾದ ಸುಶೀಲ ಕೋಟಿ ಅವರು ಪ್ರಸಾದದ ಸೇವೆಯನ್ನು ವಹಿಸಿಕೊಂಡಿದ್ದರು. ಜಯಲಕ್ಷ್ಮಿ ಬಳ್ಳಾರಿ ಕಾರ್ಯಕ್ರಮ ಸಂಯೋಜಿಸಿದರು. ರೇಣುಕಾ ಎಲ್.ಅಮಾತ್ಯ ವಂದಿಸಿದರು.
ಗಂಗಣ್ಣ ಕೋಟಿ ಹಾಗೂ ಸುಶೀಲಮ್ಮ ಕೋಟಿ ಅವರದು ಅನ್ಯೋನ್ಯ ದಾಂಪತ್ಯ. ಅಕ್ಕನ ಬಳಗದಲ್ಲಿ ಅವರೀರ್ವರ ಭಾವಚಿತ್ರವನ್ನು ಅನಾವರಣ ಮಾಡಿರುವುದು ಅತ್ಯಂತ ಶ್ಲಾಘನೀಯವಾದದ್ದು. ಅಕ್ಕನ ಬಳಗದಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವಿರಿ. ಸಾಕಷ್ಟು ಜನ ಹೊಸದಾಗಿ ಸದಸ್ಯತ್ವವನ್ನು ಪಡೆದಿದ್ದಾರೆ. ಹಳೆ ಬೇರು, ಹೊಸ ಚಿಗುರು ಇರಲು ಮರ ಸೊಬಗು ಎಂಬಂತೆ ಹಿರಿಯ ಸದಸ್ಯರು ಗಟ್ಟಿ ಬೇರಾಗಿ ಉಳಿಯುತ್ತಾರೆ. ಹೊಸದಾಗಿ ಬಂದವರು ನಳ ನಳಿಸುವ ಹಸಿರು ರಂಬೆ-ಕೊಂಬೆಗಳಾಗಿರುತ್ತಾರೆ ಎಂದು ಶ್ರೀಗಳು ಹೇಳಿದರು.