ಬೆಂಗಳೂರು:- ಹಳದಿ ಮಾರ್ಗದಲ್ಲಿ ಜ.6 ರಿಂದ ಮೆಟ್ರೋ ಶುರುವಾಗಲ್ಲ ಎಂದು BMRCL ಸ್ಪಷ್ಟನೆ ಕೊಟ್ಟಿದೆ.
ಜನವರಿ 6 ರಿಂದ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಬಿಎಂಆರ್ಸಿಎಲ್ ಸ್ಪಷ್ಟನೆ ನೀಡಿದೆ.
ಜ.6 ರಿಂದ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುತ್ತಿಲ್ಲ. ಬದಲಿಗೆ ಕೋಲ್ಕತ್ತಾದ ಟಿಟಾಗರ್ ರೈಲು ಸಂಸ್ಥೆ ಕಾರ್ಖಾನೆಯಲ್ಲಿ ತಯಾರಿಸಲಾದ ಮೊದಲ ರೈಲು ಸೆಟ್ ಜನವರಿ 6 ರಂದು ಅನಾವರಣಗೊಳ್ಳುತ್ತಿದೆ ಎಂದು ತಿಳಿಸಿದೆ.
ಇನ್ನೂ ಬಹು ನಿರೀಕ್ಷಿತ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಬೋಗಿಗಳು ಇನ್ನೂ ಬಂದಿಲ್ಲ. ಟಿಟಾಗರ್ ರೈಲ್ ಸಿಸ್ಟಂ ಲಿಮಿಟೆಡ್ ತನ್ನ ಮೊದಲ ರೈಲನ್ನು ಜನವರಿ 6 ರಂದು ಕೊಲ್ಕತ್ತಾದಿಂದ ಬೆಂಗಳೂರಿಗೆ ರವಾನಿಸಲಿದೆ. ಉಳಿದಂತೆ ಹಂತ ಹಂತವಾಗಿ ರೈಲುಗಳು ನಮ್ಮ ಮೆಟ್ರೋ ವನ್ನು ಸೇರಲಿದೆ.
ಹಳದಿ ಮಾರ್ಗ ಸಿದ್ಧವಾಗಿ ಹಲವು ತಿಂಗಳುಗಳು ಕಳೆದು ಸಂಚಾರ ಪರೀಕ್ಷೆಯೂ ಪೂರ್ಣಗೊಂಡಿದೆ. ಆದರೆ ಕಂಪನಿಗಳಿಂದ ರೈಲುಗಳ ಪೂರೈಕೆ ಕೊರತೆಯಿಂದ ಮಾರ್ಗದ ಉದ್ಘಾಟನೆ, ವಾಣಿಜ್ಯ ಸೇವೆ ಆರಂಭವಾಗಿಲ್ಲ ಎನ್ನಲಾಗಿದೆ.