ವಿಜಯಸಾಕ್ಷಿ ಸುದ್ದಿ, ಗದಗ
ದ್ರುವಾ ಸರ್ಜಾ ಅಭಿನಯದ, ನಂದಕಿಶೋರ್ ನಿರ್ದೇಶನದ ಬಹು ನಿರೀಕ್ಷಿತ ಪೊಗರು ಕನ್ನಡ ಸಿನಿಮಾದಲ್ಲಿ ಪುರೋಹಿತರೊಬ್ಬರ ಮೇಲೆ ಖಳ ನಾಯಕನೊಬ್ಬ ಪಾದರಕ್ಷೆ ಹಾಕಿಕೊಂಡಿರುವ ಪಾದವನ್ನು ಭುಜದ ಮೇಲೆ ಇಟ್ಟಿದ್ದು, ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾದ ಆ ದೃಶ್ಯವನ್ನೇ ಕಡಿತ ಮಾಡುವವರೆಗೂ ಬಂದು ತಲುಪಿದ ಬೆನ್ನಲ್ಲೇ ಇಲ್ಲೊಬ್ಬ ಬಿಜೆಪಿ ಶಾಸಕರು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕಾಮಗಾರಿಯ ಭೂಮಿಪೂಜೆ ನೆರವೇರಸಿರುವ ಘಟನೆ ಬೆಳಕಿಗೆ ಬಂದಿದೆ.

ಬಿಜೆಪಿ ಅಂದ್ರೆ ಅದು ಹಿಂದೂ ಧರ್ಮದ ಪ್ರತಿಪಾದಕ ಪಕ್ಷ. ಅದರಲ್ಲಿನ ಶಾಸಕರೂ ಅಷ್ಟೇ ಹಿಂದೂ ಧರ್ಮದ ಪರಿಪಾಲಕರು ಮತ್ತು ಆರಾಧಕರು ಎಂದು ಬಣ್ಣಿಸಲಾಗುತ್ತದೆ. ಅಲ್ಲದೇ, ಪಕ್ಷದ ತತ್ವ ಸಿದ್ದಾಂತಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಯಾವುದೇ ಶುಭ ಸಂದರ್ಭಗಳಲ್ಲಿ, ಪೂಜಾ ಕೈಂಕರ್ಯಗಳಲ್ಲಿ ಪಾದಕ್ಕೆ ಪಾದರಕ್ಷೆ ಹಾಕಿಕೊಳ್ಳದೇ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ.

ಆದರೆ, ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರು ಕಾಲಿಗೆ ಪಾದರಕ್ಷೆ ಹಾಕಿಕೊಂಡೇ ಭೂಮಿಪೂಜೆ ನೆರವೇರಿಸಿದ ಘಟನೆ ಬುಧವಾರ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದಲ್ಲಿ ನಡೆದಿದೆ.

ಲಕ್ಷ್ಮೇಶ್ವರದ ಪಂಪ ಸರ್ಕಲ್ನಿಂದ ಶ್ರೀಕ್ಷೇತ್ರ ಮುಕ್ತ್ತಿಮಂದಿರದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಇಂತಹ ದೃಶ್ಯ ಕಂಡು ಬಂದಿತು. ಈ ಸಂದರ್ಭದಲ್ಲಿ ಓರ್ವ ಸ್ವಾಮೀಜಿಗಳು ಸೇರಿದಂತೆ ಹಲವರು ಇಂತಹ ದೃಶ್ಯವೊಂದಕ್ಕೆ ಸಾಕ್ಷಿಯಾದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.