ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ಬೀದಿ ಜಗಳ ಮುಂದುವರಿದಿದೆ.
ಮೊನ್ನೆ ಮೊನ್ನೆ ತಾನೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರ ವಿಚಾರಣೆಗೆ ಠಾಣೆಗೆ ಬಂದ ಯುವಕ ಮತ್ತು ಪೊಲೀಸರ ನಡುವೆ ಪರಸ್ಪರ ಹಲ್ಲೆ ನಡೆದಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಕೂಡ ಆಗಿತ್ತು.
ಇದೀಗ ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ನಾಗಮಂಗಲದ ನ್ಯಾಯಾಲಯದ ಮುಂದೆ ಕೊರಳಪಟ್ಟಿ ಹಿಡಿದು ಪೊಲೀಸ್ ಮತ್ತು ಆರೋಪಿತನು ಹೊಡೆದಾಡಿರುವ ದೃಶ್ಯ ಕಂಡು ಬಂದಿದೆ.
ನಾಗಮಂಗಲ ಗ್ರಾಮಾಂತರ ಠಾಣೆ ಎಎಸ್‌ಐ ರಾಜು, ಮಜ್ಜನ ಕೊಪ್ಪಲು ಗ್ರಾಮದ ಪೂಜಾರಿ ಕೃಷ್ಣ ನಡುವೆ ಹೊಡೆದಾಟ ನಡೆದಿದೆ. ಆರೋಪಿ ಪೂಜಾರಿ ಕೃಷ್ಣನ ವಿರುದ್ದ ತಾಯಿ ಮರಿಯಮ್ಮ ಎಂಬುವವರು ಹಣಕ್ಕಾಗಿ ಪೀಡಿಸುತ್ತಿದ್ದಾನೆ ಅಂತ ಮಗನ ವಿರುದ್ಧವೇ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ನೀಡಿದ್ದರು.
ಮರಿಯಮ್ಮ ದೂರು ಆಧರಿಸಿ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ವಿಚಾರಣೆ ಸಲುವಾಗಿ ಠಾಣೆಗೆ ಬರುವಂತೆ ಪೂಜಾರಿ ಕೃಷ್ಣನನ್ನ ಎಎಸ್‌ಐ ರಾಜು ಕರೆದಿದ್ದರು. ಈ ವೇಳೆ ಪೊಲೀಸ್ ರಾಜು ಮತ್ತು ಪೂಜಾರಿ ಕೃಷ್ಣನ ನಡುವೆ ವಾಗ್ವಾದ ನಡೆದಿದೆ.
ದೂರು ಬಂದಿದ್ದರೆ FIR ಹಾಕಿ ನಾನು ಠಾಣೆಗೆ ಬರಲ್ಲ ಎಂದು ಕೃಷ್ಣ ಪಟ್ಟು ಹಿಡಿದಿದ್ದಾನೆ. ಈ ವೇಳೆ ಠಾಣೆಗೆ ಬರಲೇಬೇಕು ಎಂದು ಬಲವಂತವಾಗಿ ಆಟೋ ಹತ್ತಿಸಲು ಎಎಸ್‌ಐ ರಾಜು ಮುಂದಾಗಿದ್ದಾರೆ. ಈ ವೇಳೆ ಕೊರಳ ಪಟ್ಟಿ ಹಿಡಿದು ರಸ್ತೆಯಲ್ಲೇ ಪೊಲೀಸ್ ಹಾಗೂ ಆರೋಪಿ ಇಬ್ಬರು ಹೊಡೆದಾಡಿದ್ದಾರೆ. ಘಟನೆ ಬಳಿಕ ಪೂಜಾರಿ ಕೃಷ್ಣನ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.