ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ನಗರದ ಜೋಡು ರಸ್ತೆಯಿಂದ ಒಕ್ಕಲೆಬ್ಬಿಸಿ ಬಯಲು ಜಾಗೆಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆ (ಸಿಐಟಿಯ) ನೇತೃತ್ವದಲ್ಲಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ತಹಸೀಲ್ದಾರರ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಸ್ಥಳೀಯ ಪುರಸಭೆ ಆಡಳಿತ, ಪೋಲಿಸ್ ಇಲಾಖೆ, ಹಾಗೂ ಶಾಸಕರ ವಿರುದ್ಧ ಘೋಷಣೆ ಕುಗುತ್ತಾ ಪುರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಈ ವೇಳೆ ಕಾರ್ಮಿಕ ಸಂಘಟನೆಯ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ-2014 ಜಾರಿಗೊಳಿಸಿದ್ದು, ಆ ಕಾಯ್ದೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣಾ ಹೊಣೆಗಾರಿಕೆ ಸ್ಥಳೀಯ ಪುರಸಭೆಯದ್ದಿದ್ದರೂ ಪ್ರಭಾವಿ ವ್ಯಕ್ತಿಗಳ ಮಾತು ಕೇಳಿ ಅವರ ಅಣತಿಯಂತೆ ಇಡೀ ಆಡಳಿತ ವ್ಯವಸ್ಥೆ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ಆಡಳಿತಕ್ಕೆ ತನ್ನದೇ ಆದ ಘನತೆ-ಗೌರವವಿದೆ. ಅದನ್ನು ಯಾರೋ ಎಲ್ಲಿಯೋ ಕುಳಿತು ಪಾಳೆಗಾರಿಕೆ ರೀತಿಯಲ್ಲಿ ವರ್ತಿಸುವುದು ತರವಲ್ಲ. ಅವರಿಗೆ ಆಡಳಿತ ಮಾಡುವುದಿದ್ದರೆ ಜನರಿಂದ ಆಯ್ಕೆಯಾಗಿ ಬಂದು ಆಡಳಿತ ನಡೆಸಲಿ. ಹೊರತಾಗಿ ಹಿಂದೆ ಕುಳಿತು, ರಾಜಕಾರಣ ಮಾಡುವುದನ್ನು ಕೈ ಬಿಡಲಿ ಎಂದರು.
ಈಗಾಲಾದರೂ ಶಾಸಕರು, ಪುರಸಭೆ, ಪೊಲೀಸ್ ಇಲಾಖೆ, ತಹಸೀಲ್ದಾರರನ್ನೊಳಗೊಂಡAತೆ ಬೀದಿ ಬದಿಯ ವ್ಯಾಪಾರಸ್ಥರ ಸಂಕಷ್ಟ ಚರ್ಚಿಸಿ ತ್ವರಿತಗತಿಯಲ್ಲಿ ಪರಿಹಾರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದಿದ್ದರೆ ಜನವರಿ 8ರಂದು ಗಜೇಂದ್ರಗಡ ನಗರವನ್ನು ಬಂದ್ ಮಾಡಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಪುರಸಭೆಯ ಅಧಿಕಾರಿಗಳು, ಪುರಸಭೆಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪುರಸಭೆಯ ಸದಸ್ಯರು ಭೇಟಿ ನೀಡಿ, ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೇಳಿದಾಗ ಹೋರಾಟಗಾರರು ನಿರಾಕರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಎಸ್.ಎ. ದಿಂಡವಾಡ, ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಜಿಲ್ಲಾ ಸಮಿತಿ ಸದಸ್ಯ ಮೆಹಬೂಬ್ ಹವಾಲ್ದಾರ್, ಗಣೇಶ್ ರಾಠೋಡ, ಚೆನ್ನಪ್ಪ ಗುಗಲೊತ್ತರ, ಶಿವಾಜಿ ಗಡ್ಡದ, ಮೆಹಬೂಬ್ ಮಾಲ್ದಾರ, ಕರಿಯಮ್ಮ ಗುರಿಕಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಸ್ಥಳೀಯ ಪುರಸಭೆ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಿ ಉಳ್ಳವರ ಪರ ಕೆಲಸ ಮಾಡುವುದನ್ನು ಕೈ ಬಿಡಲಿ. ಜನರ ಹಿತಕ್ಕಿಂತಲೂ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ನಿಮಗೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.