ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಳೆದ ಗುರುವಾರ ರಾತ್ರಿ ನಡೆದಿದ್ದ ಡಿನ್ನರ್ ಪಾರ್ಟಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಗದ್ದಲಕ್ಕೆ ಕಾರಣವಾಗಿತ್ತು. ಡಿನ್ನರ್ ಪಾರ್ಟಿ ನಾನಾ ಆಯಾಮದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಸಚಿವರಿಗೆ ಔತಣಕೂಟವನ್ನು ಆಯೋಜನೆ ಮಾಡಿದ್ದಾರೆ.
ಇನ್ನೂ ಈ ವಿಚಾರವಾಗಿ ನಾಳೆ ನಾನು ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಡಿನ್ನರ್ ಪಾರ್ಟಿ ಅಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾಳೆ ನಾನು ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಡಿನ್ನರ್ ಪಾರ್ಟಿ ಅಲ್ಲ. ಮುಂದೆ ನಾವು ಎಸ್‌ಸಿ, ಎಸ್ಟಿ ಸಮಾವೇಶ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ಎಲ್ಲ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರಿಗೆ ಆಹ್ವಾನ ನೀಡಿದ್ದೇವೆ.
ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸುತ್ತೇವೆ. ಸಂಜೆ 7 ಗಂಟೆಗೆ ನಡೆಯುವ ಈ ಡಿನ್ನರ್‌ಗೆ ಎಸ್‌ಟಿ, ಎಸ್‌ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಹಾಗೆಂದ ಮಾತ್ರಕ್ಕೆ ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್‌ಟಿ, ಎಸ್‌ಸಿ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಅದರ ಬಗ್ಗೆಯೂ ನಾಳೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.