ಆಚರಣೆ ಬೇರೆಯಾದರೂ ಸೇರುವ ಗುರಿ ಒಂದೇ: ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

0
Spread the love

ವಿಜಯಸಾಕ್ಷಿ ಸುದ್ದಿ, ಕೊಲನಪಾಕ : ಹಸುವಿನ ಬಣ್ಣ ಬೇರೆಯಾದರೂ ಹಾಲಿನ ಬಣ್ಣ ಒಂದೇ. ಹಕ್ಕಿಗಳ ಚಿಲಿಪಿಲಿ ನಾದ ಬೇರೆಯಾದರೂ ಉಸುರುವ ಧ್ವನಿ ಒಂದೇ. ಧರ್ಮ ಗ್ರಂಥಗಳು ಬೇರೆಯಾದರೂ ಸಂದೇಶ ಒಂದೇ. ಹರಿಯುವ ನದಿಗಳು ಬೇರೆಯಾದರೂ ಸೇರುವ ಗುರಿ ಒಂದೇ. ಅದೇ ರೀತಿ ಧರ್ಮಗಳ ಆಚರಣೆ ಬೇರೆ ಬೇರೆಯಾದರೂ ಸೇರುವ ಗುರಿ ಒಂದೇ ಆಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಯಾದಾದ್ರಿ ಭುವನಗಿರಿ ಜಿಲ್ಲೆಯ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 69ನೇ ಜನ್ಮ ದಿನೋತ್ಸವ ಅಂಗವಾಗಿ ಜರುಗಿದ `ವೀರಶೈವ ಸಂಸ್ಕೃತಿ ಸಂವರ್ಧನಾ’ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಮಾರಂಭ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವ ಕಾರಣ ಅಶಾಂತಿಗೆ ಕಾರಣವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಕೊಲನಪಾಕ ಶ್ರೀ ಸೋಮೇಶ್ವರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ಡಾ.ವೀರಸೋಮೇಶ್ವರ ಜಗದ್ಗುರುಗಳ ಮಹತ್ಕಾರ್ಯ ಎಷ್ಟು ಸ್ಮರಿಸಿದರೂ ಕಡಿಮೆ ಆಗಿದೆ ಎಂದರು.

2025ನೇ ಇಸ್ವಿಯ ದಿನದರ್ಶಿಕೆಯನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಬಿಡುಗಡೆಗೊಳಿಸಿದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಈ ಪವಿತ್ರ ಸಮಾರಂಭದಲ್ಲಿ ಶ್ರೀನಿವಾಸ ಸರಡಗಿ, ದೇವಾಪುರ, ತೊನಸನಹಳ್ಳಿ, ದೇವರಭೂಪುರ, ಮಳಲಿಮಠ, ಹಂಪಸಾಗರ, ಸಂಗೊಳ್ಳಿ, ರಾಯಚೂರು, ಜವಳಿ, ಮಂಗಲಗಿ, ಓಂಕಾರ ಬೆನ್ನೂರು, ಕಾರ್ಜುವಳ್ಳಿ, ನಿಲೋಗಲ್ಲ, ಮಂಗಳವಾರಪೇಟೆ, ಅಚಲೇರಿ, ದೋರನಹಳ್ಳಿ, ಕನ್ನೂರು-ಸಿಂಧನೂರು, ಬಿಳಿಕಿ, ಬೀರೂರು, ಚಳಗೇರಿ, ಕಲಾದಗಿ, ದೇವದುರ್ಗ, ನವಿಲಕಲ್ಲು, ಬಾಗೇವಾಡಿ, ಕೊಕಟನೂರು, ಕೊಣ್ಣೂರು, ಇಂಗಳೇಶ್ವರ, ಹಾರನಹಳ್ಳಿ, ಚಂದನಕೇರಾ, ಮಳಖೇಡ, ನಿಡಗುಂದಿ, ಗುಂಡೆಪಲ್ಲಿ, ಚೌದಾಪುರಿ, ಹೆಡಗಿಮುದ್ರೆ, ದುಗ್ಲಿ-ಕಡೆನಂದಿಹಳ್ಳಿ, ಕೆಂಭಾವಿ, ಸಿಂಧಗಿ, ತಡವಲಗಾ, ಗುಂಡಕನಾಳು, ಯಂಕAಚಿ, ಆಲಮೇಲ, ಹಣಮಾಪುರ, ನೀಲೂರು ಮೊದಲ್ಗೊಂಡು ಸುಮಾರು 50ಕ್ಕೂ ಹೆಚ್ಚು ಶಿವಾಚಾರ್ಯರು ಪಾಲ್ಗೊಂಡಿದ್ದರು.

ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಶಿವಶರಣಪ್ಪ ಸೀರಿ, ಅಮೃತಪ್ಪ ಮಲಕಪ್ಪಗೌಡರ, ಗುರುಪಾದಪ್ಪ ಕಿಣಗಿ, ಸೋಮನಾಥ ಕುಲಕರ್ಣಿ, ಬೀರೂರು ಶಿವಸ್ವಾಮಿ, ಎಸ್.ಬಿ. ಹಿರೇಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಸಂಗಡಿಗರಿಂದ ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು.

ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಪರಿಶ್ರಮದಿಂದ ಜೀವನದಲ್ಲಿ ಶ್ರೇಯಸ್ಸು ಮತ್ತು ಉನ್ನತಿ ಕಾಣಲು ಸಾಧ್ಯ. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳ ಪರಿಪಾಲನೆಯಿಂದ ಸಕಲ ಶ್ರೇಯಸ್ಸು ದೊರಕುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶ್ರೀಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here