ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಕಳೆದ ಮೂರು ಗಂಟೆಯಿಂದ ಚಿರತೆ ಓಡಾಡುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಗದಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಅವರು, ಇದುವರೆಗೂ ಗದಗ ನಗರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿರತೆ ಕಾಣಿಸಿಕೊಂಡಿರುವ ಕುರಿತು ಯಾವುದೇ ಖಚಿತತೆ ಇಲ್ಲ. ಆದರೂ ಜನರ ಆತಂಕ ನಿವಾರಣೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಇರಬಹುದು ಎನ್ನಲಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಹಂಪಿ ಝೂನಿಂದ ಅನಸ್ತೇಶಿಯಾ ಇಂಜೆಕ್ಷನ್ ತರಿಸಲಾಗುತ್ತಿದೆ. ಅದರ ಜೊತೆಗೆ ಡ್ರೋಣ್ ಕ್ಯಾಮೆರಾವನ್ನೂ ಸಹ ಬಳಸಿಕೊಳ್ಳಲಾಗುವುದು. ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡವೂ ಸಹ ಸಿದ್ಧವಾಗಿದೆ ಎಂದು ಅವರು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ನಗರದ ರಿಂಗ್ ರೋಡ್ ನಲ್ಲಿರುವ ಅಂಬೇಡ್ಕರ್ ಭವನದ ಸುತ್ತಮುತ್ತ ಚಿರತೆ ನೋಡಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರಿಂದ ಚಿರತೆಯ ಸುದ್ದಿ ಹರಡಿದ್ದು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.

ಇದರಿಂದಾಗಿ ಅಂಬೇಡ್ಕರ್ ಭವನದ ಹಿಂದೆ ಇರುವ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.