ಕಡಲೆ ಬೆಳೆ ಖರೀದಿಯ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಅನ್ನದಾತರ ಹೋರಾಟ: ಜಿಲ್ಲಾಡಳಿತ ಕಚೇರಿಯೆದುರು ಸೃಷ್ಟಿಯಾದ ಗೊಂದಲದ ವಾತಾವರಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಡಲೆ ಖರೀದಿಯ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಪ್ರತಿಭಟನೆಯ ಮೊದಲೆರಡು ದಿನ ರೈತರು ಜಿಲ್ಲಾಡಳಿತ ಭವನದ ಗೇಟ್‌ಗೆ ಜಾನುವಾರುಗಳನ್ನು ಕಟ್ಟಿ, ಮೇವು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಬುಧವಾರದ ಹೊತ್ತಿಗೆ ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಾಗಿದ್ದು, ರೈತರು ಹೆದ್ದಾರಿ ಬಂದ್ ಮಾಡಿ ಹೋರಾಟವನ್ನು ತೀವ್ರಗೊಳಿಸಿದರು. ಇಷ್ಟಾದರೂ ಅಧಿಕಾರಿಗಳು ಸ್ಪಂದಿಸದಿದ್ದಾಗ ರೈತ ಮಹಿಳೆಯರು ಹೆದ್ದಾರಿಯಲ್ಲಿ ಹೊರಳಾಡಿ, ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟಾದರೂ ಜಿಲ್ಲಾಡಳಿತದಿಂದ ಸ್ಪಂದನೆ ಸಿಗದಿದ್ದಾಗ ರೈತ ಮಹಿಳೆಯೊಬ್ಬರು ಏಕಾಏಕಿ ವಿಷ ಸೇವಿಸಿದರು.

ಪೊಲೀಸರು, ಪ್ರತಿಭಟನಾಕಾರರು ವಿಷ ಸೇವಿಸಿದ ಮಹಿಳೆಯತ್ತ ಧಾವಿಸುತ್ತಿದ್ದಂತೆ ಇನ್ನೊಬ್ಬ ರೈತ ಮಹಿಳೆಯೂ ವಿಷ ಸೇವನೆಗೆ ಮುಂದಾದರು. ತಕ್ಷಣ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ವಿಷದ ಬಾಟಲಿಗಳನ್ನು ಕಿತ್ತುಕೊಂಡು ಅನಾಹುತ ತಪ್ಪಿಸಿದರು. ತಕ್ಷಣವೇ ಸ್ಥಳದಲ್ಲಿದ್ದ ಆಂಬುಲೆನ್ಸ್ ಮೂಲಕ ವಿಷಸೇವನೆ ಮಾಡಿದ್ದ ರೈತ ಮಹಿಳೆಯರನ್ನು ಜಿಮ್ಸ್ ಆಸ್ಪತ್ರೆಗೆ ರವಾಸಿದರು. ವಿಷ ಸೇವನೆ ಮಾಡಿದ ರೈತ ಮಹಿಳೆಯರನ್ನು ಸರಸ್ವತಿ ದಾಸರ, ಗೀತಾ ಬಾಲಪ್ಪನವರ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ  ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಂ) ಗದಗ ಒಕ್ಕೂಟದಡಿ ಬರುವ ಮಹಿಳಾ  ಸ್ವಸಹಾಯ ಸಂಘಗಳ ಮೂಲಕ ಎನ್‌ಆರ್‌ಎಲ್‌ಎಂ ಜಿ.ಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾ.ಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊಂದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು 27 ಕೋಟಿ ರೂ ಮËಲ್ಯದ ಕಡಲೆಯನ್ನು ಹಲವು ಗ್ರಾಮಗಳಲ್ಲಿ ವಿಕ್ರಿ ಮಾಡಿಸಿದ್ದರು. ಇದರ ಭಾಗವಾಗಿ 20 ಕೋಟಿ ರೂ ಮೊತ್ತವನ್ನು ಆರ್‌ಟಿಜಿಎಸï ಮೂಲಕ ಪಾವತಿಸಿದ್ದರು. ಬಾಕಿ ಉಳಿದ 6.50 ಕೋಟಿ ರೂ ಪಾವತಿಯಾಗಿಲ್ಲ. ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಕಡಲೆ ಖರೀದಿಸಿ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ. ಹೀಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ರೈತರು ಆಗ್ರಹಿಸಿದರು.

ಗದಗ ಜಿಲ್ಲಾಡಳಿತ ಭವನದ ಎದುರು ಬುಧವಾರ ಮುಂಜಾನೆಯಿಂದಲೇ ರೈತರು ವಿನೂತನ ರೀತಿಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಬಾರಕೋಲ್ ಮೂಲಕ ಚಾಟಿ ಬೀಸಿ, ಒನಕೆ ಹಿಡಿದು ಮಾನವ ಸರಪಳಿ ರಚಿಸಿ, ರಸ್ತೆ ಬಂದ್ ಮಾಡಿ, ವಾಹನ ಅಡ್ಡಗಟ್ಟಿ ಪ್ರತಿಭಟನೆಯ ಸ್ವರೂಪ ತೀವ್ರಗೊಳಿಸಿದ್ದರು. ಈ ನಡುವೆ ರೈತ ಮಹಿಳೆಯರು ವಿಷ ಸೇವನೆ ಮಾಡಿದ್ದು ಪ್ರತಿಭಟನಾಕಾರರಲ್ಲಿಯೂ ಆತಂಕ ಮೂಡಿಸಿದೆ.

ರೈತ ಮಹಿಳೆಯರು ವಿಷ ಸೇವಿಸಿದ ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸ್ಥಳಕ್ಕೆ ಆಗಮಿಸಿ ರೈತ ಮಹಿಳೆಯರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ನಿಮ್ಮ ಸಮಸ್ಯೆಯ ಕುರಿತು ಚರ್ಚಿಸಲು ಜಿ.ಪಂ ಸಿಇಓ ಅವರನ್ನೇ ಇಲ್ಲಿಗೆ ಕರೆಸಲಾಗುವುದು, ಅವರೊಂದಿಗೆ ಚರ್ಚಿಸಿ ಎಂದು ಮನವೊಲಿಸಿದ ತರುವಾಯ ರೈತರು ರಸ್ತೆ ತಡೆ ಹಿಂಪಡೆದು ಮಾತುಕತೆಗೆ ಮುಂದಾದರು.


Spread the love

LEAVE A REPLY

Please enter your comment!
Please enter your name here