ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗದಂತೆ ಗಮನಹರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನುಳಿದ 70 ದಿನಗಳಲ್ಲಿ ಎಲ್ಲಾ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕವಾಗಿ ಕಾಳಜಿ ಮಾಡಿ ಮಾರ್ಗದರ್ಶನ ಮಾಡುವುದರೊಂದಿಗೆ ಈ ವರ್ಷ ಯಾವ ವಿದ್ಯಾರ್ಥಿಯೂ ಕನ್ನಡ ವಿಷಯದಲ್ಲಿ ಅನುತ್ತೀರ್ಣನಾಗದಂತೆ ಗಮನಹರಿಸಬೇಕು ಎಂದು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಸೂಚಿಸಿದರು.

Advertisement

ಇಲ್ಲಿನ ಸಿ.ಎಸ್. ಪಾಟೀಲ ಬಾಲಕರ ಪ್ರೌಢಶಾಲೆಯಲ್ಲಿ ಗದಗ ಶಹರ ವಲಯದ ಕನ್ನಡ ಭಾಷಾ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಯಟ್‌ನ ಉಪನ್ಯಾಸಕ ಕೆ.ಪಿ. ಸಾಲಿಮಠ ಮಾತನಾಡುತ್ತಾ, ಇಂದಿನ ಈ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರದಲ್ಲಿ ತಾವೆಲ್ಲರೂ ಅತ್ಯುತ್ತಮವಾದ ಪ್ರಶ್ನೆಗಳನ್ನು ತೆಗೆಯುವ ತಂತ್ರಗಳನ್ನು ಕಲಿತು ತಮ್ಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಹತ್ತಾರು ಪ್ರಶ್ನೆ ಪತ್ರಿಕೆಗಳನ್ನು ರಚಿಸಿ, ಉತ್ತರ ಬರೆಯುವ ತಂತ್ರವನ್ನು ರೂಢಿ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಿಆರ್‌ಪಿ ಎಂ.ಎ. ಯರಗುಡಿ, ಇಲಾಖೆಯು 20 ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದಂತೆ ವಿಭಾಗ ಮಟ್ಟದ ಪರೀಕ್ಷೆಗೆ ನಾವೆಲ್ಲ ಮಕ್ಕಳನ್ನು ಸೂಕ್ತ ರೀತಿಯಲ್ಲಿ ತಯಾರು ಮಾಡಬೇಕು. ಅಲ್ಲದೆ ಇಲ್ಲಿ ತಮಗೆ ಉಚಿತವಾಗಿ ನೀಡುತ್ತಿರುವ ಘಟಕ ಪರೀಕ್ಷೆಯ ಅಭ್ಯಾಸ ಹಾಳೆಗಳನ್ನು ಬಳಸಿಕೊಂಡು ಯಾವೊಬ್ಬ ವಿದ್ಯಾರ್ಥಿಯೂ ಕನ್ನಡ ವಿಷಯದಲ್ಲಿ ಅನುತ್ತೀರ್ಣನಾಗದಂತೆ ಹಾಗೂ 125ಕ್ಕೆ 125 ಅಂಕಗಳಿಸುವ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದರು.

ವೇದಿಕೆಯ ಮೇಲೆ ಸಿ.ಎಸ್. ಪಾಟೀಲ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಯಕ, ಕೆ.ಬಿ. ಭಜಂತ್ರಿ, ಬಡ್ತಿ ಹೊಂದಿದ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಗಿಡ್ನಂದಿ, ಶಹರ ವಲಯದ ಇ.ಸಿ.ಓ ಮುರಳಿ ಸೋಲಾಪುರ ಹಾಜರಿದ್ದರು. ಸಂಪನ್ಮೂಲ ಶಿಕ್ಷಕ ಜಿ.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಡಯಟ್‌ನ ಉಪನ್ಯಾಸಕರಾದ ಜಿ.ಡಿ ದಾಸರ ಮಾತನಾಡಿ, ಬಿಆರ್‌ಪಿ ಎಂ.ಎ. ಯರಗುಡಿ ಅವರು ಎಲ್ಲಾ ಶಾಲೆಯ ಶಿಕ್ಷಕರಿಗೆ ಘಟಕ ಪರೀಕ್ಷೆಗಳ 30 ಅಭ್ಯಾಸ ಹಾಳೆಗಳನ್ನು ಉಚಿತವಾಗಿ ನೀಡಿರುವುದು ಅತ್ಯಂತ ಶ್ಲಾಘನೀಯ. ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಂಡು ಗದಗ ಶಹರ ವಲಯವು ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ಫಲಿತಾಂಶ ಸಾಧಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here