ವಿಜಯಸಾಕ್ಷಿ ಸುದದ್ದಿ, ಭಾಲ್ಕಿ: ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರತೆಯನ್ನು ಹೊಂದಿದೆ. ಮಾನವೀಯ ಆದರ್ಶ ಮೌಲ್ಯಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಅವಶ್ಯಕತೆಯಿದೆ. ನಾಡಿನ ನಾನಾ ಭಾಗಗಳಲ್ಲಿ ಜರುಗುವ ಜಾತ್ರಾ ಮಹೋತ್ಸವದ ಗುರಿ ಸಾಮರಸ್ಯ ಸದ್ಭಾವನೆ ಬೆಳೆಸುವುದಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಹಲಬರ್ಗಾ ಶ್ರೀ ರಾಚೋಟೇಶ್ವರ ಮಠದ ಶ್ರೀ ಸಿದ್ಧರಾಮೇಶ್ವರ 12ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಠಾಧ್ಯಕ್ಷರಾದ ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರಾಗಿದೆ. ಹಲವು ಧರ್ಮ-ಹಲವು ಆಚರಣೆ ಇದ್ದರೂ ಅವೆಲ್ಲವುಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ದೇಶ ಉಳಿದರೆ ಧರ್ಮ ಉಳಿಯಲು ಸಾಧ್ಯ. ಜಾತಿ-ಜನಾಂಗಗಳ ಗಡಿ ಮೀರಿ ಮಾನವೀಯ ತತ್ವ ತಳಹದಿಯ ಮೇಲೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಬೇಕೆಂಬುದು ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಭಕ್ತಿ ಭಂಡಾರಿ ಬಸವಣ್ಣನವರ ಆದರ್ಶ ಗುರಿಯಾಗಿತ್ತು. ಆ ದಿಶೆಯಲ್ಲಿ ಎಲ್ಲರೂ ಮುನ್ನಡೆದು ಸಮಾಜದಲ್ಲಿ ಶಾಂತಿ ಸಮಾಧಾನ ಬೆಳೆಯಲು ಶ್ರಮಿಸಬೇಕಾಗಿದೆ.
ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಕಳೆದ 12 ವರುಷಗಳಲ್ಲಿ ಧರ್ಮ ಸಂಸ್ಕೃತಿ ಬೆಳೆಸುವ ಮತ್ತು ಸಂಸ್ಕಾರ ಸದ್ವಿಚಾರ ಬೆಳೆಸುವುದರ ಮೂಲಕ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದ ಶ್ರೇಯಸ್ಸು ಶ್ರೀಗಳವರಿಗೆ ಸಲ್ಲುತ್ತದೆ. ಶ್ರೀಗಳವರ ಆದರ್ಶ ದಾರಿಯಲ್ಲಿ ಭಕ್ತ ಸಮುದಾಯ ಮುನ್ನಡೆದು ಸದೃಢ ಸಶಕ್ತ ದೇಶ ಮತ್ತು ಧರ್ಮವನ್ನು ಕಟ್ಟಿ ಬೆಳೆಸುವಂತಾಗಲೆಂದು ಹಾರೈಸಿ ಶ್ರೀಗಳವರಿಗೆ ಆಶೀರ್ವದಿಸಿದರು.
ಮೇಹಕರ ರಾಜೇಶ್ವರ ಶಿವಾಚಾರ್ಯರು ಧರ್ಮ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ಹಣೆಗಾಂವ ಶಂಕರಲಿAಗ ಶಿವಾಚಾರ್ಯರು, ಕೌಳಾಸ ಶಿವಾಚಾರ್ಯರು ಉಪಸ್ಥಿತರಿದ್ದರು. ಶಾಂತಕುಮಾರ ಪ್ರಭಾ, ಮಲ್ಲಿಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ರಮೇಶ ಪ್ರಭಾರ, ಉಮಾಕಾಂತ ಪ್ರಭಾ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಸಮಾರಂಭಕ್ಕೂ ಮುನ್ನ ದ್ವಾದಶ ವರ್ಧಂತಿ ನಿಮಿತ್ಯ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಶಾಸ್ತ್ರೋಕ್ತವಾಗಿ ಮಂಗಲ ಸ್ನಾನ ಮಾಡಿಸಿ ನೂತನಾಂಬರವನ್ನು ಭಕ್ತರು ಸಮರ್ಪಿಸಿದರು.
ನೇತೃತ್ವ ವಹಿಸಿದ ಹಾವಗಿ ಲಿಂಗೇಶ್ವರ ಶ್ರೀಗಳು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಭಾಗ್ಯ ಬಹಳ ದೊಡ್ಡದಿದೆ. ಶ್ರೀ ರಂಭಾಪುರಿ ಜಗದ್ಗರುಗಳು ದಯಮಾಡಿಸಿ 12ನೇ ಜಾತ್ರಾ ಮಹೋತ್ಸವ ಹಾಗೂ ನಮ್ಮ ಪಟ್ಟಾಧಿಕಾರದ 12ನೇ ವರ್ಷದ ವರ್ಧಂತಿಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವದಿಸುತ್ತಿರುವುದು ಪೂರ್ವಾರ್ಜಿತ ಪುಣ್ಯದ ಫಲವೆಂದು ಭಾವಿಸುತ್ತೇವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾಕಾಲ ಒಳ್ಳೆಯದನ್ನೇ ಮಾಡುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತ ಮತ್ತು 12ನೇ ಶತಮಾನದ ಶರಣರ ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ ಎಂದರು.