-ಬಸವರಾಜ ಕರುಗಲ್
ರಿಷಬ್ ಶೆಟ್ಟಿ ಸಿನಿಮಾ ಅಂದ ಮೇಲೆ ಒಂದು ಲೆವೆಲ್‌ಗೆ ನಿರೀಕ್ಷೆ ಇರುತ್ತೆ. ಆದರೆ ಹೀರೋ ಒಂದು ಅನಿರೀಕ್ಷಿತ ಸಿನಿಮಾ. ರಿಷಬ್ ಸಿನಿಮಾಗಳು ಇದುವರೆಗೂ ಕ್ಲಾಸ್ ಆಡಿಯನ್ಸ್ ಕೇಂದ್ರೀಕೃತ. ಆದರೆ ಈ ಬಾರಿ ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಹೀರೋ ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾ ನೋಡಿದಾಗ ಇಲ್ಲಿ ಗೆದ್ದದ್ದು ಮಾತ್ರ ಹೀರೋ ಅಲ್ಲ, ಹೀರೋಯಿನ್ ಎಂಬುದು ಸ್ಪಷ್ಟ.
ಮಾಸ್ ಪ್ರೇಕ್ಷಕರು ನಮ್ಮ ಸಿನಿಮಾ ನೋಡಲಿ ಅಂತ ಸಿನಿಮಾ ಟೈಟಲ್‌ನ್ನ ಹೀರೋ ಅಂತ ಇಟ್ಟ ಲೆಕ್ಕಾಚಾರ ವರ್ಕ್ ಔಟ್ ಆಗೋದು ಕಷ್ಟ. ಹಾಗಂತ ಹೀರೋ ಸಿನಿಮಾ ನೋಡಲು ಕ್ಲಾಸ್ ಪ್ರೇಕ್ಷಕರು ಬರೋದು ಸಹ ಅನುಮಾನವೇ. ಸಿನಿಮಾದ ಟೈಟಲ್ ನೋಡಿ ಭರ್ಜರಿ ಫೈಟ್‌ಗಳಿವೆ ಎಂದು ಊಹಿಸಿಕೊಂಡು ಥೇಡರ್‌ಗೆ ಬಂದ್ರೆ ಮಾಸ್ ಆಡಿಯನ್ಸ್‌ಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾಗಂತ ಸಿನಿಮಾದಲ್ಲಿ ಫೈಟ್‌ಗಳಿಲ್ಲ ಅಂತಲ್ಲ, ಫೈಟ್‌ಗಳು ನಿರೀಕ್ಷೆಗೆ ತಕ್ಕಂತಿಲ್ಲ. ಹೀರೋ ಹೋಡಿತಾನೆ ಅಂದುಕೊಂಡಾಗೆಲ್ಲ ಕಾಮಿಡಿ ಮಾಡ್ತಾನೆ. ಕಾಮಿಡಿ ಮಾಡ್ತಾನೆ ಅಂದುಕೊಂಡಾಗೆಲ್ಲ ಹೊಡೆದುಬಿಡುತ್ತಾನೆ.
ಸಿನಿಮಾ ಸ್ಟೋರಿಯ ಒನ್ ಲೈನ್ ಹೇಳಬೇಕಂದ್ರೆ ಡಾನ್ ಒಬ್ಬನನ್ನು ಮದುವೆಯಾದ ಲವ್ವರ್ ಕೊಲ್ಲಲು ಎಅನ್ ಮನೆಗೆ ಹೋಗುವ ಹೀರೋ ಒಂದು ಬಂಗಲೆ, ಸುತ್ತಲಿನ ಕಾಡಿನಲ್ಲಿ ಬಂಧಿಯಾಗಿ ನಿರೀಕ್ಷೆಗೂ ಮೀರಿದ ಘಟನೆಗಳ ಸುಖಾಂತ್ಯದ ಸಿನಿಮಾ ಹೀರೋ..
ಹೀರೋ ತನ್ನ ಪ್ರೇಯಸಿಯನ್ನು ಕೊಲ್ತಾನಾ? ಅಥವಾ ತನ್ನ ಹೆಂಡತಿಯನ್ನು ಕೊಲ್ಲಲು ನೆಪವೊಂದನ್ನು ಮುಂದಿಟ್ಟುಕೊಂಡು ತನ್ನ ಅಶೋಕ ವನ ಎಸ್ಟೇಟ್‌ಗೆ ಕಾಲಿಡುವ ಹೀರೋವನ್ನು ಡಾನ್ ಮತ್ತು ಆತನ ಸಹಚರರು ಏನು ಮಾಡುತ್ತಾರೆ ಎಂಬುದೇ ಕಥೆ. ಇದನ್ನ ಥೇಟರ್‌ನಲ್ಲೇ ನೋಡಿದರೆ ಚಂದ.
ರಿಷಬ್ ಶೆಟ್ಟಿ, ನಿರ್ದೇಶಕರಾಗಿ ಹಲವು ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಅವರು ಮೊದಲ ಬಾರಿಗೆ ನಾಯಕರಾಗಿ ನಟಿಸಿದ ಬೆಲ್ ಬಾಟಮ್ ಸಿನಿಮಾ ಸಹ ವಿಶಿಷ್ಟ ಮ್ಯಾನರೀಸಂ ಹಾಗೂ ಗಟ್ಟಿ ಕಥೆಯಿಂದ ಗೆದ್ದಿದೆ. ಆದರೆ ಈ ಬಾರಿ ಭರತ್ ಶೆಟ್ಟಿ ನಿರ್ದೇಶನದಲ್ಲಿ ಹೀರೋ ಆಗಿ ತೆರೆ ಮೇಲೆ ಬಂದಿದ್ದಾರೆ. ಬೆಲ್ ಬಾಟಮ್‌ನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದಾದರೂ ಡಿಟೇಕ್ಟಿವ್ ದಿವಾಕರ್ ಎಂಬ ಪಾತ್ರದಂತೆ ಹೀರೋ ನೆನಪಲ್ಲಿ ಉಳಿಯೋದು ಕಷ್ಟ.
ಇಡೀ ಸಿನಿಮಾದಲ್ಲಿ ಗೆದ್ದದ್ದು ಹೀರೋ ಅಲ್ಲ, ನಾಯಕಿಯಾಗಿ ನಟಿಸಿದ ಗಾನವಿ ಲಕ್ಷ್ಮಣ. ಹೀರೋ ಸಿನಿಮಾದಲ್ಲಿ ಹೆಚ್ಚು ಸ್ಕೋಪ್ ಇರೋದೇ ನಾಯಕಿ ಪಾತ್ರಕ್ಕೆ. ಅಳು, ಕಾಮಿಡಿ, ಗಂಭೀರತೆ, ಆಕ್ರೋಶ… ಹೀಗೇ ಎಲ್ಲ ಭಾವಗಳನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮಗಳು ಜಾನಕಿ ಧಾರಾವಾಹಿ ಮೂಲಕ ನಟಿಯಾಗಿ ಗುರುತಿಸಿಕೊಂಡ ಗಾನವಿ, ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಲಕ್ಷಣ ತೋರಿಸಿದ್ದಾರೆ.
ನಿರ್ದೇಶಕ ಎಂ.ಭರತ್ ಲಾಕ್‌ಡೌನ್‌ನ ಇತಿಮಿತಿಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಿರೋದು ನಿಜಕ್ಕೂ ಪ್ರಶಂಸನಾರ್ಹ. ಆದರೆ ಅಂತಿಮವಾಗಿ ಪ್ರೇಕ್ಷಕ ಬಯಸೋದು ಒಂದೊಳ್ಳೆ ಸಿನಿಮಾವನ್ನೇ ಹೊರತು ನಿರ್ದೇಶಕನ ಪರಿಸ್ಥಿತಿಯಲ್ಲ.
ಪ್ರಮುಖ ವಿಲನ್ ಆಗಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಉಗ್ರಂ ಮಂಜು ಸಹ ಮತ್ತೊಬ್ಬ ವಿಲನ್ ಆಗಿ ಗಮನ ಸೆಳೆಯುತ್ತಾರೆ. ಅಜನೀಶ್ ಸಂಗೀತದಲ್ಲಿ ಮೂಡಿ ಬಂದಿರುವ ಮೂರು ಇಂಪಾದ ಹಾಡುಗಳ ಪೈಕಿ ಯೋಗರಾಜ್ ಭಟ್ ಬರೆದ ನೆನಪಿನ ಹುಡುಗಿಯೇ… ಹಾಡು ಕೆಲ ಕ್ಷಣ ನೆನಪಲ್ಲಿ ಉಳಿಯುವ ಶಕ್ತಿ ಹೊಂದಿದೆ.
ಇಡೀ ಸಿನಿಮಾ ಒಂದು ಬಂಗಲೆ, ಬಂಗಲೆಗೆ ಹತ್ತಿರದ ಒಂದು ದಟ್ಟ ಕಾನನದ ನಡುವೆ ಬೆಳಗಿನಿಂದ ರಾತ್ರಿವರೆಗೂ ನಡೆಯುವ ಘಟನೆಗಳ ಕಥಾಹಂದರವನ್ನು ಛಾಯಾಗ್ರಾಹಕ ಅರವಿಂದ ಕಶ್ಯಪ್ ಚನ್ನಾಗಿ ಹಿಡಿದಿಟ್ಟಿದ್ದಾರೆ. ಸಿನಿಮಾದ ಕೊನೆಯ ಅರ್ಧ ಗಂಟೆ ಬಿಟ್ಟರೆ ಉಳಿದ ಅವಧಿಯ ಈ ಸಿನಿಮಾದ ದೃಶ್ಯಗಳಿಗೆ ನೋಡಿಸಿಕೊಂಡು ಹೋಗುವ ಗುಣವಿದೆ.
ಕೊನೆಯ ಕಿಕ್ಕರ್ ಎಂದರೆ ದೃಶ್ಯವೊಂದರಲ್ಲಿ ನಾಯಕ ಹೇಳುವ ಮಾತು…
“ಚಿಕ್ಕವರಿದ್ದಾಗ ಮೆಮೊರಿ ಪವರ್ ಹೆಚ್ಚಾಗಲಿ ಅಂತ ಹಾರ್ಲಿಕ್ಸ್, ಕಾಂಪ್ಲೆನ್ ಕುಡಿಸ್ತಾರೆ. ಅದರ ಎಫೆಕ್ಟ್ ಗೊತ್ತಾಗೋದು ಹುಡುಗಿ ಬಿಟ್ಟು ಹೋದಾಗ…”
ರೇಟಿಂಗ್: ***
*: ಚನ್ನಾಗಿಲ್ಲ.
**: ಪರವಾಗಿಲ್ಲ
***: ನೋಡಬಹುದು
****: ನೋಡಬೇಕು
*****: ಮಿಸ್ ಮಾಡ್ಕೊಬೇಡಿ.