ಬೆಂಗಳೂರು:- ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅದ್ಭುತ ಕ್ಷಣ ಎಂದು ಭಾವಿಸಲಾಗುತ್ತದೆ. ಬಂಧು ಬಳಗ, ಸ್ನೇಹಿತರನ್ನು ವಿವಾಹ ಸಂಭ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಲಾಗುತ್ತದೆ. ಆದರೆ ಇಂತಹ ಸಂಭ್ರಮ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾದರೂ ಇಡೀ ಮದುವೆ ಮನೆ ಅಲ್ಲೋಲ ಕಲ್ಲೋಲ ಆಗುತ್ತದೆ. ಇಂತಹದ್ದೇ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ವರ ತನ್ನ ಮದುವೆ ದಿನವೇ ಸ್ನೇಹಿರೊಂದಿಗೆ ಕಂಠ ಪೂರ್ತಿ ಕುಡಿದು ಹಸಮಣೆಗೆ ಬಂದು ಕುಳಿತಿದ್ದಾನೆ. ವರನ ಸ್ಥಿತಿ ನೋಡಿ ಬೇಸತ್ತ ವಧು ವಿವಾಹವನ್ನೇ ರದ್ದು ಪಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿವಾಹಕ್ಕೆ ಹೆಣ್ಣಿನ ಕುಟುಂಬದವರು ಮೊದಲೇ ಮಂಟಪಕ್ಕೆ ಬಂದು ಕುಳಿತಿದ್ದಾರೆ. ಆದರೆ ವರ ಮತ್ತು ಆತನ ಸ್ನೇಹಿತರು ಕುಡಿದು ಬಂದಿದ್ದಾರೆ. ಮಂಟಪಕ್ಕೆ ಬಂದ ವರನಿಗೆ ಆರ್ಚಕರು ಮದುವೆ ಆಚರಣೆಯನ್ನು ಹೇಗೆ ಅನುಸರಿಸಬೇಕೆಂದು ಹೇಳಿಕೊಡುತ್ತಿದ್ದರೆ, ಆತ ಮಾತ್ರ ಕುಡಿದ ಮತ್ತಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ವರನ ಸ್ಥಿತಿಯನ್ನು ಗಮನಿಸಿದ ವಧು ಇಂತಹ ಕುಡುಕನನ್ನು ಮದುವೆ ಯಾಗಲಾರೆ ಎಂದು ಹೇಳಿ ವಿವಾಹವನ್ನು ರದ್ದು ಮಾಡಿದ್ದಾರೆ.
ನಂತರ ವರನ ಕಡೆಯವರು ಕೂತು ಮಾತನಾಡುವ ಪ್ರಯತ್ನಪಟ್ಟರು ಪ್ರಯೋಜನವಾಗಲಿಲ್ಲ. ನಮ್ಮ ಮಗಳ ಜೀವನ ಹಾಳಾಗುತ್ತದೆ ಎಂದು ಹೇಳಿ ಪೋಷಕರು ಸಹ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ಮದುವೆ ನಿಂತ ಹಿನ್ನೆಲೆ ನೆರೆದಿದ್ದವರಿಗೆ ವಧು ಕ್ಷಮೆ ಕೇಳುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.