ಗದಗ:- ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಗದಗ ಸಂಚಾರಿ ಪೊಲೀಸರು, ದಂಡದ ಬಿಸಿ ಮುಟ್ಟಿಸಿದ್ದಾರೆ.

ಗದಗನಲ್ಲಿ ಅಪ್ರಾಪ್ತನಿಗೆ ಆಟೋ ಕೊಟ್ಟಿದ್ದಕ್ಕೆ ಮಾಲೀಕನೊಬ್ಬನಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡ ವಿಧಿಸಿಲಾಗಿದೆ. ಆ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಕಳೆದ ಜ. 5ರಂದು ನಗರದ ಲದ್ವಾ ಸರ್ಕಲ್ ಬಳಿ ಈ ಘಟನೆ ಜರುಗಿದೆ.

ಅಪ್ರಾಪ್ತ ಬಾಲಕ ಟಂಟಂ ವಾಹನ ಚಲಾಯಿಸುವಾಗ ಸಂಚಾರಿ ಪೊಲೀಸರು ವಾಹನ ಸೀಜ್ ಮಾಡಿ ಗಾಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದರು. ಬೆಟಗೇರಿ ಮೂಲದ ಬಿನ್ನಾಳ್ ಎಂಬುವವರು ಅಪ್ತಾಪ್ತನಿಗೆ ಆಟೋ ಕೊಟ್ಟಿದ್ದರು. ಪ್ಯಾಸೆಂಜರ್ ಹತ್ತಿಸಿಕೊಂಡು ಆಟೋ ಓಡಿಸೋದಕ್ಕೆ 16 ವರ್ಷದ ಬಾಲಕ ಮುಂದಾಗಿದ್ದ. ಬಾಲಕನ ಏಜ್ ಪ್ರೂಫ್ ಚೆಕ್ ಮಾಡಿ ವಾಹನ ಸೀಜ್ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ನೋಟಿಸ್ ಪಡೆದ ಗಾಡಿ ಮಾಲೀಕ, ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ನಡೆಸಿ ವಾಹನ ಮಾಲೀಕನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ಮ್ಯಾಜಿಸ್ಟ್ರೆಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಸದ್ಯ ಪೋಷಕರೇ ಎಚ್ಚರ.. ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ ಎಂಬ ಬರಹದ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನೂ ನಗರದಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಹೆಚ್ಚಾಗಿದೆ. ಮಕ್ಕಳು ದ್ವಿಚಕ್ರ, ಲಘು ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಓಡಾಡುವುದು ಕಂಡುಬರುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಬೀಳಬೇಕಾಗಿದೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.


