ವಿಜಯಸಾಕ್ಷಿ ಸುದ್ದಿ, ರೋಣ: ಜನ್ಮದಿನದ ಆಚರಣೆಗಳು ಸದಾಕಾಲ ಸಮಾಜಮುಖಿಯಾಗಿರಬೇಕು ಎಂದು ವೈದ್ಯ ಡಾ. ಎಸ್.ಬಿ. ಲಕ್ಕೋಳ ಹೇಳಿದರು.
ಅವರು ಸೋಮವಾರ ಪುರಸಭೆ ಸದಸ್ಯ, ಯುವ ಮುಖಂಡ ಸಂಗನಗೌಡ ಪಾಟೀಲರ ಜನ್ಮದಿನಾಚರಣೆ ನಿಮಿತ್ತ ಅಭಿಮಾನಿಗಳಿಂದ ಜರುಗಿದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಜನ್ಮದಿನಾಚರಣೆಗಳು ಅಡಂಬರದಿಂದ ಕೂಡಿರಬಾರದು. ಬದಲಾಗಿ ಸಮಾಜಕ್ಕೆ ಒಳಿತಾಗುವ ಆಚರಣೆಗಳಾಗಬೇಕು. ಇಂದು 200ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿರಿವುದು ಒಳ್ಳೆಯ ಬೆಳವಣಿಗೆ. ಕಾರಣ, ಅನೇಕ ಜೀವಗಳಿಗೆ ಈ ರಕ್ತ ಅವಶ್ಯಕವಾಗಿರುತ್ತದೆ, ಇದರಿಂದ ನೂರಾರು ಕುಟುಂಬಗಳಿಗೆ ಒಳಿತಾಗುತ್ತದೆ ಎಂದರು.
ಗುಲಗಂಜಿ ಮಠದ ಗುರುಪಾದ ದೇವರು ಆಶೀರ್ವಚನ ನೀಡಿ, ರಕ್ತದಾನ ಅತ್ಯಂತ ಮಹತ್ವವುಳ್ಳದ್ದಾಗಿದ್ದು, ಅಭಿಮಾನಿಗಳು ಬೃಹತ್ ಪ್ರಮಾಣದಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹವಾಗಿದೆ. ಜನ್ಮ ದಿನಾಚರಣೆಗಳು ಅರ್ಥಪೂರ್ಣವಾಗಿರಬೇಕು ಎನ್ನುವುದಕ್ಕೆ ರಕ್ತದಾನ ಶಿಬಿರ ಮಾದರಿಯಾಗಿದ್ದು, ಇದರಿಂದ ಅನೇಕರಿಗೆ ಒಳಿತಾಗಲಿದೆ ಎಂದರು.
ಮುತ್ತಣ್ಣ ಸಂಗಳದ, ರಾಜಣ್ಣ ಗಿರಡ್ಡಿ, ತೋಟಪ್ಪ ನವಲಗುಂದ, ರಾಜಣ್ಣ ಸುಂಕದ, ನವಲಗುಂದ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.