Home Gadag News ಉಗ್ರಾಣಗಳಿಗೆ ಬೀಗಮುದ್ರೆ ಸಮಂಜಸವಲ್ಲ: ಶಾಸಕ ಡಾ.ಚಂದ್ರು ಲಮಾಣಿ

ಉಗ್ರಾಣಗಳಿಗೆ ಬೀಗಮುದ್ರೆ ಸಮಂಜಸವಲ್ಲ: ಶಾಸಕ ಡಾ.ಚಂದ್ರು ಲಮಾಣಿ

0
ಉಗ್ರಾಣಗಳಿಗೆ ಬೀಗಮುದ್ರೆ ಸಮಂಜಸವಲ್ಲ: ಶಾಸಕ ಡಾ.ಚಂದ್ರು ಲಮಾಣಿ
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸರಕಾರಿ ಸ್ವಾಮ್ಯದ ಕಚೇರಿಗಳ ಅಧೀನದಲ್ಲಿರುವ ರೈತರ ಧವಸ-ದಾನ್ಯಗಳನ್ನು ಸಂಗ್ರಹಿಸಿರುವ ಗೋದಾಮುಗಳಿಗೆ ಬೀಗ ಹಾಕಿರುವದು ಎಷ್ಟು ಸೂಕ್ತ, ಮೊದಲು ಲಕ್ಷಾಂತರ ರೂ ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾಸಗಿ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಿ. ಇದು ಸರಕಾರದಿಂದ ಬರಬೇಕಾದ ಬಾಕಿಯಾಗಿದ್ದರಿಂದ ಹಂತ ಹಂತವಾಗಿ ವಸೂಲಿ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ಹೀಗೆ ಮಾಡಿರುವದು ಯೋಗ್ಯವಾದ ಕ್ರಮವಲ್ಲ ಎಂದು ಶಾಸಕ ಡಾ.ಚಂದ್ರು ಲಮಾಣಿ ಮುಖ್ಯಾಧಿಕಾರಿ ಮೇಲೆ ಗರಂ ಆದ ಘಟನೆ ನಡೆಯಿತು.

ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದವರು ಕಳೆದ ಆರೇಳು ವರ್ಷಗಳಿಂದ ಪಟ್ಟಣದ ಪುರಸಭೆಗೆ ಪಾವತಿಸಬೇಕಾದ 14 ಲಕ್ಷ ರೂ ತೆರಿಗೆ ಪಾವತಿಸದ್ದರಿಂದ ಶನಿವಾರ ಮುಖ್ಯಾಧಿಕಾರಿ ಮಹೇಶ ಹಡಪದ ನೇತೃತ್ವದಲ್ಲಿ ಉಗ್ರಾಣಗಳಿಗೆ ಬೀಗ ಹಾಕಲಾಗಿತ್ತು. ವಿಷಯ ತಿಳಿದು ಸೋಮವಾರ ಉಗ್ರಾಣ ನಿಗಮಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಬೇಟಿ ನೀಡಿ ಸರಕಾರಿ ಅಧೀನದ ಗೋದಾಮುಗಳಿಗೆ ಬೀಗ ಹಾಕಿರುವದಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರನ್ನು ಪ್ರಶ್ನಿಸಿದರು.

ಗೋದಾಮಿನಲ್ಲಿ ಗೋದಿ, ಜೋಳ, ಮೆಕ್ಕೆಜೋಳ, ಹೆಸರು ಶೇಂಗಾ ಸೇರಿದಂತೆ ಸುಮಾರು 10 ಸಾವಿರ ಚೀಲಗಳಿದ್ದು, 500 ಕ್ವಿಂಟಲ್‌ನಷ್ಟು ಧಾನ್ಯಗಳನ್ನು ಇಲ್ಲಿ ರೈತರು ಸಂಗ್ರಹಿಸಿಟ್ಟಿದ್ದಾರೆ. ಹೀಗೆ ಸೀಜ್ ಮಾಡಿದರೆ ರೈತರ ದವಸ-ದಾನ್ಯಗಳಿಗೆ ಹಾನಿಯಾದರೆ ಯಾರು ಹೊಣೆ? ಸಂಬಂಧಪಟ್ಟ ಅಧಿಕಾರ ಜೊತೆಗೆ ಮಾತನಾಡಿ ಬಾಕಿ ಇರುವ ಹಣವನ್ನು ತುಂಬಿಸುವ ಪ್ರಯತ್ನ ಮಾಡುತ್ತೇನೆ. ಸರಕಾರಿ ಆಸ್ತಿ ಸೀಜ್ ಮಾಡುವ ಮೊದಲು ನಮಗೂ ತಿಳಿಸಬೇಕಿತ್ತು ಎಂದು ಹೇಳಿದರು.

ಈ ವೇಳೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳೊಂದಿಗೆ ಅವರು ದೂರವಾಣಿ ಮೂಲಕ ಮಾತನಾಡಿ, ಪುರಸಭೆಯವರು ಸೀಜ್ ಮಾಡಿ ಮೂರು ದಿನಗಳಾಗಿದ್ದರೂ ಇನ್ನೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲವೇಕೆ ಎಂದು ಪ್ರಶ್ನಿಸಿದರಲ್ಲದೆ, ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ, ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ ಹಾಜರಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಬಸವರಾಜ ಚಕ್ರಸಾಲಿ, ವಿಜಯ ಬೂದಿಹಾಳ, ವಿಶಾಲ ಬಟಗುರ್ಕಿ, ವಿನಯ ಪಾಟೀಲ ಹಾಗೂ ಉಗ್ರಾಣ ನಿಗಮದ ಸಿಬ್ಬಂದಿಗಳು ಇದ್ದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪಟ್ಟಣದ ಉಗ್ರಾಣ ನಿಗಮದವರು 2019ರಿಂದ ಇಲ್ಲಿಯವರೆಗೆ ಪುರಸಭೆಗೆ ಪಾವತಿಸಬೇಕಾದ 14 ಲಕ್ಷಕ್ಕೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ ಮತ್ತು ಸ್ವತಃ ನಿಗಮದ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗಳಿಗೆ ತೆರಿಗೆ ಪಾವತಿಸುವಂತೆ ತಿಳಿಸಿದ್ದೇನೆ. ಆದಾಗ್ಯೂ ಯಾವುದೇ ಸ್ಪಂದನೆ ಇಲ್ಲದ್ದರಿಂದ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಾನೂನಿನನ್ವಯ ನಿಗಮ ಗೂಡಾನ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಶಾಸಕರಿಗೆ ತಿಳಿಸಿದರು.


Spread the love

LEAVE A REPLY

Please enter your comment!
Please enter your name here