ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಶಿಗ್ಲಿ-ಹೂವಿನಶಿಗ್ಲಿ ಮಾರ್ಗದ ತಾಲೂಕು ವ್ಯಾಪ್ತಿಯ ಕೇವಲ 1.5 ಕಿ.ಮೀ ರಸ್ತೆ ಕಾಮಗಾರಿ ಅನುದಾನದ ಕೊರತೆಯಿಂದ 2 ವರ್ಷಗಳಿಂದಲೂ ಅರ್ಧಕ್ಕೆ ನಿಂತಿದೆ. ಹಾಕಿರುವ ಜಲ್ಲಿಕಲ್ಲುಗಳು ರಸ್ತೆಯುದ್ದಕ್ಕೂ ಹರಡಿ ಸಂಪೂರ್ಣ ಹಾಳಾಗಿ ಧೂಳಿನಿಂದ ಕೂಡಿರುವ ಈ ರಸ್ತೆಯ ದುರಸ್ತಿಗೆ ಯಾರೂ ದಿಕ್ಕಿಲ್ಲದಂತಾಗಿರುವದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
2 ವರ್ಷಗಳ ಹಿಂದೆ ಮಾಜಿ ಶಾಸಕ ರಾಮಣ್ಣ ಲಮಾಣಿ ತಮ್ಮ ಅಧಿಕಾರಾವಧಿಯ ಕೊನೆಯ ಕಾಲಘಟ್ಟದಲ್ಲಿ ಜಿಲ್ಲಾ ಪಂಚಾಯಿತಿಗೆ ಸೇರಿದ ಈ ರಸ್ತೆಗೆ 50 ಲಕ್ಷ ರೂ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ಕಾಮಗಾರಿಯ ಗುತ್ತಿಗೆದಾರರು 800 ಮೀಟರ್ ರಸ್ತೆಗೆ ಮೋರಂ ಹಾಕಿ ಖಡೀಕರಣಕ್ಕೆ ರಸ್ತೆಯ ಬದಿ ಖಡಿ ಹಾಕಿದ್ದರು. ಏತನ್ಮದ್ಯೆ ವಿಧಾನಸಭೆ ಚುನಾವಣೆ ಬಳಿಕ ಬದಲಾದ ಸರ್ಕಾರ ಕಾಮಗಾರಿ ಪೂರ್ಣಗೊಳ್ಳದ್ದರಿಂದ ಮೀಸಲಿಟ್ಟ ಅನುದಾನಕ್ಕೆ ಕೊಕ್ಕೆ ಹಾಕಿತು. ಇದರಿಂದ ಕಳೆದ 2 ವರ್ಷಗಳಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲದೇ ಗುತ್ತಿಗೆದಾರ ಖರ್ಚು ಮಾಡಿದ ಅಂದಾಜು 8-10 ಲಕ್ಷಕ್ಕೂ ಎಳ್ಳುನೀರು ಬಿಟ್ಟಂತಾಗಿರುವ ಬಗ್ಗೆ ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲದಲ್ಲಿ ಕೆಸರು-ಉಳಿದಂತೆ ಧೂಳುಮಯವಾಗಿರುವ ಈ ರಸ್ತೆ ಅನಾಥವಾಗಿದೆ. ಶಿಗ್ಲಿಯಿಂದ ಹೂವಿನಶಿಗ್ಲಿ ಮಾರ್ಗವಾಗಿ ಯಲವಗಿ ರೇಲ್ವೆ ನಿಲ್ದಾಣ ಸಂಪರ್ಕಕ್ಕೆ ಈ ರಸ್ತೆ ಸಾಕಷ್ಟು ಅನಕೂಲವಾಗಿತ್ತು. ಅಲ್ಲದೇ ಲಕ್ಮೇಶ್ವರ ಭಾಗದಿಂದ ಹೂವಿನಶಿಗ್ಲಿ ಮಠಕ್ಕೆ ಹೋಗುವವರು, ಅಲ್ಲಿಂದ ಲಕ್ಮೇಶ್ವರ ಕಡೆಗೆ ಬರುವವರು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತೆ ಯಲವಗಿ ಮೂಲಕ ಸಂಚಾರ ಮಾಡುತ್ತಿದ್ದಾರೆ. ರಸ್ತೆ ದುರಸ್ಥಿಗೆ ಸಾರ್ವಜನಿಕರು, ಮಠಾಧೀಶರು ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಲಕ್ಮೇಶ್ವರ ತಾಲೂಕು ವ್ಯಾಪ್ತಿಗೆ ಸೇರಿದ 1.5 ಕಿ.ಮೀ ರಸ್ತೆ ಮಾತ್ರ ಹಾಳಾಗಿದ್ದು, ಸವಣೂರ ತಾಲೂಕು ವ್ಯಾಪ್ತಿಗೆ ಸೇರಿದ 3-4 ಕಿ.ಮೀ ರಸ್ತೆ ಸುಸ್ಥಿತಿಯಲ್ಲಿದೆ. ಸಂಪೂರ್ಣ ಹಾಳಾಗಿರುವ ಈ ರಸ್ತೆಯ ಧೂಳಿನಿಂದ ಅಕ್ಕಪಕ್ಕದ ಜಮೀನುಗಳಲ್ಲಿನ ಬೆಳೆ ಹಾಳಾಗುತ್ತಿದೆ. 3 ದಿನ ನಡೆಯುವ ಹೂವಿನಶಿಗ್ಲಿ ಮಠದ ಜಾತ್ರೆಗೆ ನಿತ್ಯ ಸಾವಿರಾರು ಭಕ್ತರು ಸಂಚರಿಸುವುದರಿಂದ ಧೂಳು ಏಳದಂತೆ ನೀರಾದರೂ ಸಿಂಪಡಿಸುವ ಕಾರ್ಯವನ್ನು ಸಂಬಂಧಪಟ್ಟವರು ಮಾಡಿ ಪುಣ್ಯ ಕಟ್ಟಿಕೊಳ್ಳಿ.
– ಶಿವಾನಂದ ಕಟ್ಟಿಮನಿ.
ಹೂವಿನಶಿಗ್ಲಿ.
ಅನುದಾನದ ಕೊರತೆಯಿಂದ ರಸ್ತೆ ಕಾಮಗಾರಿ 2 ವರ್ಷದಿಂದ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಅಭಿವೃದ್ಧಿಪಡಿಸಲಾಗುವುದು.
-ಮಾರುತಿ ರಾಠೋಡ.
ಜಿ.ಪಂ ರಾಇ ಎಇಇ.