ವಿಜಯಸಾಕ್ಷಿ ಸುದ್ದಿ, ಗದಗ: ಸಮಸ್ತ ಭೋವಿ ಸಮಾಜ ಭಾಂದವರ ಆರಾಧ್ಯ ದೈವ ಶ್ರೀ ಶಿವಯೋಗಿ ಕಾಯಕಯೋಗಿ ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಗರದ 30ನೇ ವಾರ್ಡಿನಲ್ಲಿರುವ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಜ. 14ರಂದು ಬಸವ ದಳ ಮತ್ತು ತೋಂಟದಾರ್ಯ ಮಠದ ಸಹಯೋಗದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ ಎಚ್.ಪಾಟೀಲ, ಶಿವಯೋಗಿ ಸಿದ್ದರಾಮೇಶ್ವರರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಕಾಯಕ, ದಾಸೋಹ ಭಾವವನ್ನು ನಿತ್ಯ ಜೀವನದಲ್ಲಿ ಅನುಸರಿಸಿದರೆ ಶರಣರ ಸಮೀಪಕ್ಕೆ ಯುವಕರು ಸಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಪ್ರೊ. ಶಿವಾನಂದ್ ಪಟ್ಟಣಶೆಟ್ಟರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಸ್ತಾವಿಕವಾಗಿ ಆಂಜನೇಯ ಕಟ್ಟಿಗೆ ಮಾತನಾಡಿ, ಯುವ ಮುಖಂಡರಾದ ಕೃಷ್ಣಗೌಡ ಪಾಟೀಲರು ಸಿದ್ದರಾಮೇಶ್ವರ ಮಹಾದ್ವಾರದ ಬಾಗಿಲಿಗೆ 10 ಲಕ್ಷ ರೂ ಅನುದಾನ ಬರುವ ಹಾಗೆ ಪ್ರಯತ್ನ ಮಾಡಿ ಸಮಾಜದ ಕೆಲಸಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿರುವುದನ್ನು ಸ್ಮರಿಸಿದರು. ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಮತ್ತು ನಮ್ಮ ಸಮಾಜದ ಬಾಂಧವರಿಗೆ ಅವಿನಾಭಾವ ಸಂಬಂಧವಿದೆ. ಅದೇ ಪರಂಪರೆಯನ್ನು ಈಗಿನ ಶ್ರೀಗಳೊಂದಿಗೆ ಮುಂದುವರೆಯುತ್ತಾ ಶಿವಯೋಗಿ ಸಿದ್ದರಾಮೇಶ್ವರ ಕಾಯಕ, ಯೋಗ ಮತ್ತು ದಾಸೋಹ ಇವೆಲ್ಲಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾ.ಪಂ ಮಾಜಿ ಅಧ್ಯಕ್ಷ ವಿದ್ಯಾಧರ್ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದರಾಮೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ನಾಗರೆಡ್ಡಿ ನಡುಗುಂದಿ, ಶಿವಾನಂದ್ ಪಟ್ಟಣಶೆಟ್ಟಿ, ಶೇಖಣ್ಣ ಕವಳಿಕಾಯಿ, ಮುಗದ್ ಅಸೂಟಿ, ಶ್ರೀನಿವಾಸ್ ಭಂಡಾರಿ, ರವಿ ಕೋಟಿ, ಸಹದೇವ್, ನಾಗಪ್ಪ ಹನುಮಂತಪ್ಪ ನಿಡುಗುಂದಿ, ಜಗದೀಶ್, ದೇವು ತಿಮ್ಮರೆಡ್ಡಿ, ಗಾಲಪ್ಪ ವಡ್ಡರ್, ಷಣ್ಮುಖಪ್ಪ, ರಾಮು ಕಾಳಗಿ ಹಾಗೂ ಸಮಸ್ತ ಭೋವಿ ಸಮಾಜ ಭಾಂದವರು ಉಪಸ್ಥಿತರಿದ್ದರು.