ವಿಜಯಸಾಕ್ಷಿ ಸುದ್ದಿ, ಗದಗ: ನೂತನ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ ಬಂತೆದರೆ ಮುದ್ರಣ ಕಾಶಿ ಗದುಗಿನಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ. ಸಾಲು ಸಾಲು ರಜೆ ಬಂತೆಂದರಂತೂ ಶಾಲಾ ಮಕ್ಕಳಿಗೆ, ನೌಕರ ವರ್ಗದವರಿಗೆ ರಜೆಯ ಮಜಾ ಅನುಭವಿಸುವ ಕಾತರ. ಈ ಹಬ್ಬದ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಿಂಕದಕಟ್ಟಿ ಮೃಗಾಲಯ ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.
ನಾಡಿನಾದ್ಯಂತ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಗದುಗಿನಲ್ಲಿ ಮಾತ್ರ ಸಂಕ್ರಾಂತಿ ಹಬ್ಬವನ್ನು ಇನ್ನೂ ವಿಶೇಷವಾಗಿ ಆಚರಿಸಲಾಗುತ್ತಿದೆ. ಹಬ್ಬದ ಈ ಸಂಭ್ರಮದ ಘಳಿಗೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಬಿಂಕದಕಟ್ಟಿ ಮೃಗಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ಮನೆಯಿಂದ ತಂದ ತರಹೆವಾರಿ ಅಡುಗೆ ಊಟ ಮಾಡಿ ಸಂಭ್ರಮದಿಂದ ಕಾಲ ಕಳೆದರು.
ಎಲ್ಲ ಪ್ರಾಣಿಗಳನ್ನು ನೋಡಿದ ಬಳಿಕ ಪಕ್ಕದಲ್ಲಿರುವ ಸಾಲುಮರದ ತಿಮ್ಮಕ್ಕ ಪಾರ್ಕ್ಗೆ ತೆರಳಿ, ಅಲ್ಲಿ ಜೋಕಾಲಿ ಸೀಸಾ, ಜಾರುಬಂಡಿ, ಸಾಹಸ ಕ್ರೀಡೆಗಳನ್ನು ಆಡಿ ಮೆರೆದರು. ಮಹಿಳೆಯರು, ಪುರುಷರು, ಮಕ್ಕಳು ವಿವಿಧ ಆಟಗಳನ್ನು ಆಡಿ ಖುಷಿಪಟ್ಟರು. ಸಿಂಹ, ಹುಲಿಗಳು ಘರ್ಜನೆಯ ಮೂಲಕ ಪ್ರಾಣಿ ಪ್ರಿಯರನ್ನು ರಂಜಿಸಿದರೆ, ಬಣ್ಣ ಬಣ್ಣದ ಪಕ್ಷಿಗಳು ಇಂಪಾದ ಧ್ವನಿಗಳ ಮೂಲಕ ಪ್ರಾಣಿ ಪ್ರಿಯರ ಮನ ತಣಿಸಿವೆ. ಉತ್ತರ ಕರ್ನಾಟಕ ಶೈಲಿಯ ಖಡಕ್ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ-ಎಳ್ಳು ಹೋಳಿಗೆ, ಬದನೆಕಾಯಿ-ಕಾಳು ಪಲ್ಯ ಇತ್ಯಾದಿ ಖಾದ್ಯಗಳನ್ನು ಮನೆಯಿಂದಲೇ ಸಿದ್ಧಪಡಿಸಿಕೊಂಡು ಬಂದು ಪಾರ್ಕ್ ನಲ್ಲಿ ಕುಳಿತು ಊಟ ಮಾಡಿ ಸಂಭ್ರಮಿಸಿದರು.
ಅರಣ್ಯ ಇಲಾಖೆ ಪ್ರಾಣಿ ಸಂಗ್ರಹಾಲಯವನ್ನು ಸಾಕಷ್ಟು ಅಭಿವೃದ್ಧಿಪಡಿಸಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯ ಹಾಗೂ ಸಂಕ್ರಾಂತಿ ಹಬ್ಬದ ರಜೆಯಲ್ಲಿ ಹೊಸ ಅತಿಥಿಗಳೊಂದಿಗೆ ಕಳೆದು ಪ್ರಕೃತಿಯ ಮಡಿಲಲ್ಲಿ ಹಬ್ಬವಾಚರಿಸಿದ ಹೊಸ ಹುಮ್ಮಸ್ಸಿನೊಂದಿಗೆ ಹಿಂದಿರುಗಿದರು.
ಈ ಹಿಂದೆ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳೇ ಇಲ್ಲದೆ ಕಳೆಗುಂದಿತ್ತು. ಆದರೆ ಈಗ ಈ ಮೃಗಾಲಯ ಪ್ರಾಣಿಗಳಿಂದ ತುಂಬಿದೆ. ಉತ್ತರ ಕರ್ನಾಟಕದಲ್ಲಿ ಕಾಡು ಅಪರೂಪವಾಗಿದ್ದು, ಈ ಭಾಗದ ಜನರಿಗೆ ಸಿಂಹ, ಹುಲಿ, ಚಿರತೆ, ಕತ್ತೆಕಿರುಬ, ತೋಳಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ವೀಕ್ಷಿಸುವುದೆಂದರೆ ಎಲ್ಲಿಲ್ಲದ ಕೂತೂಹಲ. ಹೀಗಾಗಿ ಬಿಂಕದಕಟ್ಟಿಯ ಪ್ರಾಣಿ ಸಂಗ್ರಹಾಲಯಕ್ಕೆ ಧಾರವಾಡ, ಹುಬ್ಬಳ್ಳಿ, ಹಾವೇರಿ, ಕೊಪ್ಪಳದಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ.