ಕೋಟಿಗೊಬ್ಬ ಮದಕರಿ ನಾಯಕನಂಥ ಶ್ರೀರಾಮ್ ಈ ರಾಬರ್ಟ್

Vijayasakshi (Gadag News) :

ರಾಬರ್ಟ್ ಸಿನಿಮಾ ವಿಮರ್ಶೆ

ಬಾಕ್ಸ್…
ರೇಟಿಂಗ್

*-ಚೆನ್ನಾಗಿಲ್ಲ

**-ಪರವಾಗಿಲ್ಲ, ***-ಚೆನ್ನಾಗಿದೆ, ****ತುಂಬಾ ಚೆನ್ನಾಗಿದೆ, *****-ಮಿಸ್ ಮಾಡ್ದೆ ನೋಡಿ

-ಬಸವರಾಜ ಕರುಗಲ್.
‘ಮನುಷ್ಯ ಹುಟ್ತಾನೆ ಕೆಟ್ಟವನು. ಅದಕ್ಕೆ ಭಗವದ್ಗೀತೆ, ಖುರಾನ್, ಬೈಬಲ್‍ನಂಥ ಕೃತಿಗಳು ಹುಟ್ಟಿಕೊಂಡಿದ್ದು. ಕೆಟ್ಟ ಮನುಷ್ಯನಲ್ಲಿ ಒಳ್ಳೇತನ ತುಂಬುವುದೇ ಇವುಗಳ ಉದ್ದೇಶ’-ಇದು ರಾಬರ್ಟ್ ಸಿನಿಮಾದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೇಳುವ ಡೈಲಾಗ್ ಹಾಗೂ ಚಿತ್ರದ ಒನ್ ಲೈನ್ ಸ್ಟೋರಿ ಸಹ ಎನ್ನಬಹುದು…

ದರ್ಶನ್ ಸಿನಿಮಾ ಎಂದಮೇಲೆ ಮಾಸ್ ಆಗಿರಬೇಕು ಎಂಬುದು ಅವರ ಸಿನಿಮಾ ನಿರ್ದೇಶನ ಮಾಡುವ ಬಹುತೇಕರ ಅಜೆಂಡಾ. ರಾಬರ್ಟ್ ಸಹ ಇದಕ್ಕೆ ಹೊರತಾಗಿಲ್ಲ. ದರ್ಶನ್ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡೇ ರಾಬರ್ಟ್ ತೆರೆಗೆ ಬಂದಿದ್ದಾನೆ. ಆದರೆ ಈ ಸಿನಿಮಾದಲ್ಲಿ ಹೊಡೆದಾಟ, ಬಡಿದಾಟಗಳಷ್ಟೇ ಮಹತ್ವವನ್ನು ಕಥೆಗೂ ನೀಡಲಾಗಿದೆ ಎಂಬುದನ್ನು ಹೇಳಬಹುದು. ಆದರೆ ಕಥೆ ಒಂದೇ ಗುಟುಕಿಗೆ ನಿಲುಕುವಂಥದ್ದಲ್ಲ. ವಿರಾಮದವರೆಗೂ ಸಿನಿಮಾದ ವೇಗ ಕ್ಲಾಸ್ ಮತ್ತು ಮಾಸ್ ವರ್ಗದವರನ್ನ ಹಿಡಿದಿಡುತ್ತದೆ. ವಿರಾಮದ ನಂತರ ಮಾಸ್ ದೃಶ್ಯಗಳಿಗೆ ಆದ್ಯತೆ ನೀಡಲಾಗಿದೆಯಾದರೂ ಸಾಗುವ ಕಥೆ, ಕ್ಲಾಸ್ ವರ್ಗದವರಿಗೂ ಇಷ್ಟವಾಗುತ್ತದೆ.

ಅವನೋ ತೊದಲು ಮಾತಿನವ. ಅವನ ಮಗನಿಗೂ ಅದೇ ಸಮಸ್ಯೆ. ತಾನಾಯಿತು ತನ್ನ ಕೆಲಸವಾಯಿತು. ಹಿಂಸೆ ಮಹಾಪಾಪ ಎಂಬ ಗಾಂಧಿ ತತ್ವವನ್ನು ನಂಬಿಕೊಂಡು ಬದುಕು ಸಾಗಿಸುವಾತ. ಮಗನೋ ತಮಗೆ ಯಾರಾದರೂ ಕೆಟ್ಟತನ ಬಗೆದರೆ ರಿವೇಂಜ್ ತಗೋಬೇಕು ಎಂಬ ಮನಸ್ಥಿತಿಯವ. ಯುದ್ಧ ಗೆಲ್ಲುವ ಶಕ್ತಿ ಇದ್ದರೂ ಬುದ್ಧನ ಬದುಕನ್ನು ರೂಢಿಸಿಕೊಂಡವ ರಾಘವ ಅಲಿಯಾಸ್ ರಾಬರ್ಟ್. ಅವನು ರಾಕ್ಷಸರನ್ನು ಸಂಹರಿಸುವ ಬ್ರಹ್ಮರಾಕ್ಷಸನಾಗಿದ್ದರೂ ಮಗನಿಗಾಗಿ ಬದಲಾವಣೆಗೊಂಡವ. ಮಗನ ಸಂತೋಷಕ್ಕಾಗಿ ಎಂಥ ಕಷ್ಟವನ್ನು ಸಹಿಸಿಕೊಳ್ಳಬಲ್ಲ, ಮಗನಿಗೆ ಗೊತ್ತಾಗದಿದ್ದರೆ ಎಂಥ ದೈತ್ಯರನ್ನೇ ಕ್ಷಣಾರ್ಧದಲ್ಲೇ ನೆಲಕ್ಕುರುಳಿಸಬಲ್ಲ ಚಾಣಾಕ್ಷ. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ ಕೋದಂಡರಾಮ. ಖಳರ ಪಾಲಿಗೆ ಚತುದರ್ಶಕ ಭುವನ ಭಯಂಕರನಾದ ಪ್ರಚಂಡ ರಾವಣ. ಮಗನ ಮುಂದೆ ಮಾತ್ರ ರಾವಣಾವತಾರ ಗೊತ್ತಾಗದ ಹಾಗೆಯೇ ಬದುಕಿಕೊಂಡ ಬಂದವ. ಯಾಕೆ ಹೀಗೇ ಎಂಬುದನ್ನ ಥೇಟರ್‍ನಲ್ಲೇ ನೋಡಿದರೆ ಚೆಂದ.

ಒಟ್ಟಾರೆ ಸಿನಿಮಾದ ಆರಂಭ ಶಿವಣ್ಣನ ಶ್ರೀರಾಮ್ ನೆನಪಿಸುತ್ತೆ. ಅಂತ್ಯ ಕಿಚ್ಚ ಸುದೀಪ್‍ನ ವೀರ ಮದಕರಿ ನೆನಪಿಸುತ್ತೆ. ಉಳಿದಂತೆ ವಿಷ್ಣುದಾದಾ ಅಭಿನಯದ ಕೋಟಿಗೊಬ್ಬ ಸಿನಿಮಾವನ್ನ ನೆನಪಿಸುತ್ತೆ. ಆದರೂ ಸಿನಿಮಾ ಈಗಿನ ಟ್ರೆಂಡ್‍ಗೆ ತಕ್ಕಂತಿದ್ದು, ಕಾಸಿಗಂತೂ ಮೋಸ ಮಾಡಲ್ಲ. ಆರಂಭದಿಂದ ಅಂತ್ಯದವರೆಗೂ ಎಲ್ಲೂ ಬೋರ್ ಆಗದ ಹಾಗೆ ಸಿನಿಮಾ ಸಾಗುತ್ತದೆ. ಸಿನಿಮಾದಲ್ಲಿ ಗೆಳೆತನ, ತಂದೆ-ಮಗನ ಸೆಂಟಿಮೆಂಟ್ ಇದೆ. ಗ್ಯಾಂಗ್ ವಾರ್‍ಗಳಿವೆ. ಕಾಮಿಡಿ ಬೆರೆಸಿದ ಕ್ಲೈಮಾಕ್ಸ್ ಫೈಟ್ ಇದೆ. ಸಿಂಪಲ್ಲಾಗಿ ಹೇಳಬೇಕಂದ್ರೆ ಎಲ್ಲ ಥರದ ಮಸಾಲೆ ಬೆರೆಸಿ ರುಚಿಕಟ್ಟಾದ, ತಲೆ ಹಿಡಿಯದಂಥ, ನಾಲಿಗೆ ಮತ್ತೇ ಮತ್ತೇ ಬೇಡುವ ಬೆಸ್ಟ್ ಬಿರಿಯಾನಿಯಂತಿದ್ದಾನೆ ರಾಬರ್ಟ್.
ಚಿಕನ್ ಬೇಕಾದವರು ಪ್ರತ್ಯೇಕವಾಗಿ ಚಿಕನ್ ತೆಗೆದುಕೊಳ್ಳಬಹುದು. ಅದನ್ನ ನಾಯಕನೇ ಬೇಕಾದರೂ ಮಾಡಿಕೊಡಬಲ್ಲ. ಯಾಕೆಂದರೆ ಚಿತ್ರದಲ್ಲಿ ನಾಯಕನದ್ದು ಅಡುಗೆ ಭಟ್ಟನ ಪಾತ್ರ. ತಿಥಿ ಊಟಕ್ಕೆ ಫೇಮಸ್ ಆಗಿರುವ ಆತನದ್ದೇ ಕ್ಯಾಟರಿಂಗ್ ಗ್ಯಾಂಗ್ ಇದೆ. ವೆಜ್‍ ಊಟಕ್ಕೆ ಇದು ಎಲ್ಲ ಕಡೆ ಪ್ರಸಿದ್ಧಿ. ದೃಶ್ಯವೊಂದರಲ್ಲಿ ಖಳರಿಗೆ ನಾನ್ ವೆಜ್ ಅಡುಗೆ ಸಹ ಮಾಡಿಕೊಡುತ್ತಾನೆ. ಕ್ಯಾಟರಿಂಗ್ ತಾತಾ ಇದನ್ನ ವಿರೋಧಿಸಿದರೆ ಮಡಿ-ಮೈಲಿಗೆಗಿಂತ ಮನುಷ್ಯತ್ವ ದೊಡ್ಡದು ಯಜಮಾನ್ರೆ ಎಂದು ಬುದ್ಧನಂತೆ ಮಾತನಾಡುತ್ತಾನೆ.

ಉಮಾಪತಿ ನಿರ್ಮಾಪಕನ ಜಾಗದಲ್ಲಿ ನಿಂತು ಚಿತ್ರ ನಿರ್ಮಾಣ ಮಾಡಿದ್ದಾರೆ. ಒಟಿಟಿ ಫ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಭಾರಿ ಮೊತ್ತದ ಆಫರ್ ಬಂದ್ರೂ ಅದನ್ನ ತಿರಸ್ಕಾರ ಮಾಡಿ ಥೇಟರ್‍ನಲ್ಲಿ ರಿಲೀಜ್ ಮಾಡಿದ್ದಾರೆ. ಚಿತ್ರದ ಮೇಲೆ ಅವರಿಗಿದ್ದ ವಿಶ್ವಾಸ ನಿಜ ಎನ್ನುವಷ್ಟರ ಮಟ್ಟಿಗೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ರಾಬರ್ಟ್ ದೊಡ್ಡ ಕ್ಯಾನ್ವಾಸ್ ಆಗಿರೋದ್ರಿಂದ ಚಿತ್ರದಲ್ಲಿ ಕಲಾವಿದರ ದೊಡ್ಡ ಬಳಗವೇ ಇದೆ. ಅದರಲ್ಲೂ ಜಗಪತಿಬಾಬು ಹಾಗೂ ಕಣ್ ಹೊಡಿಯಾಕ.. ಅವತರಣಿಕೆಯ ತೆಲುಗು ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿ ತೆಲುಗು ಚಿತ್ರರಂಗದಲ್ಲೂ ಸುಮಾರು 500 ಪರದೆಗಳ ಮೇಲೆ ತೆಲುಗಿನ ರಾಬರ್ಟ್ ಆರ್ಭಟ ಶುರುವಾಗಿದೆ. ಕಾಮಿಡಿಯಲ್ಲಿ ಚಿಕ್ಕಣ್ಣನಿಗೆ ಸ್ಕೋಪ್ ಕಡಿಮೆ ಇದ್ದರೂ ಚಿಕ್ಕಣ್ಣ ಮಾತ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ಕಾಮಿಡಿ ಆ್ಯಕ್ಟರ್ ಶಿವರಾಜ.ಕೆ.ಆರ್. ಪೇಟೆಗೆ ಒಳ್ಳೇ ರೋಲ್ ಸಿಕ್ಕಿದೆ. ಶಿವರಾಜ್ ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ರವಿಕಿಶನ್, ರವಿಶಂಕರ್, ಅಶೋಕ, ಅವಿನಾಶ್, ದೇವರಾಜ್ ಮತ್ತಿತರರ ಅಭಿನಯದ ಬಗ್ಗೆ ಎರಡೂ ಮಾತಿಲ್ಲ.

ಮರಿಟೈಗರ್ ವಿನೋದ್ ಪ್ರಭಾಕರ್ ಪಾತ್ರ ಸಿನಿಮಾದ ಜೀವಾಳ ಎನ್ನಬಹುದು. ವಿನೋದ್ ತೆರೆಯ ಮೇಲೆ ಬಹಳ ಹೊತ್ತು ಕಾಣಿಸುವುದಿಲ್ಲವಾದರೂ ಸಿನಿಮಾದ ಕಥೆಯ ಮುಖ್ಯ ಸ್ತಂಭದಂತೆ ಪಾತ್ರ ರಚಿಸಲಾಗಿದೆ. ಅದಕ್ಕೆ ವಿನೋದ್ ನಿಸ್ಸಂಶಯವಾಗಿ ಜೀವ ತುಂಬಿದ್ದಾರೆ. ನಾಯಕಿಯರಾಗಿ ಆಶಾಭಟ್, ಸೋನಲ್ ನೋಡಲು, ಕುಣಿಯಲು ಚಂದವೋ ಚಂದ. ನಟನೆಯ ವಿಷಯದಲ್ಲೂ ನೋ ಕಾಮೆಂಟ್ಸ್. ಹಾಡುಗಳ ಬಗ್ಗೆ ಹೇಳೋದೇ ಬೇಡ. ಒಂದಕ್ಕಿಂತ ಒಂದು ಹಾಡುಗಳು ಸೂಪರ್ ಆಗಿವೆ. ಹರಿಕೃಷ್ಣ ರಾಗ ಸಂಯೋಜನೆ ಮತ್ತೊಮ್ಮೆ ಗೆದ್ದಿದೆ. ಚಿತ್ರದ ಡೈಲಾಗ್ಸ್ ಮಾಸ್ ಆಡಿಯನ್ಸ್‍ಗೆ ಹಬ್ಬ. ರಾಬರ್ಟ್‍ನ ಅಂದಗಾಣಿಸಲು ಸಿನಿಮಾಟೋಗ್ರಾಫರ್ ಸುಧಾಕರ ಶ್ರಮ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಹಾಗಂತ ಸಿನಿಮಾದಲ್ಲಿ ನೆಗೆಟಿವ್ ಅಂಶಗಳೇ ಇಲ್ಲ ಅಂತಲ್ಲ. ಪಾಸಿಟಿವಿಟಿ ಮುಂದೆ ಲಾಜಿಕ್ ಇಲ್ಲದ ನೆಗೆಟಿವ್ ಥಾಟ್ಸ್ ಲೆಕ್ಕಕ್ಕೆ ಬರಲ್ಲ.

ಲಾಸ್ಟ್ ಪಂಚ್:
ಇಬ್ಬರು ಗೆಳೆಯರ ನಡುವೆ ನಡೆಯುವ ವಾಗ್ಯುದ್ಧದಲ್ಲಿ ಬರುವ ಮನುಷ್ಯರನ್ನ ಸೈನೈಡ್‍ಗಿಂತ ಫಾಸ್ಟ್ ಆಗಿ ಸಾಯಿಸೋದು ನೆಗೆಟಿವ್ ಥಾಟ್ಸ್ ..

ಫೈನಲಿ ಈ ರಾಬರ್ಟ್ ಕೆಲವರ ಲೈಫ್‍ನಲ್ಲಿ ವಿಲನ್ ಆಗಿರೋ ಹಲವರ ಲೈಫ್‍ನ ಹೀರೋ ಎನ್ನಬಹುದು. ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಪ್ಯಾಕೇಜ್ಡ್ ಮೂವಿ ರಾಬರ್ಟ್.

ರೇಟಿಂಗ್: ****
ಚಿತ್ರ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

seventeen − 9 =