ಹಾಸನ: ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಾಸನದ ಪ್ರಭಾವಿ ಮುಖಂಡ ಪಟೇಲ್ ಶಿವರಾಂ (75) ನಿಧನರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ, ನಾಲ್ಕು ದಶಕಗಳ ಕಾಲ ಜೆಡಿಎಸ್ನಲ್ಲಿ ಸಕ್ರಿಯರಾಗಿದ್ದರು. ಅದಲ್ಲದೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಆಪ್ತರಾಗಿದ್ದರು.
ಪಟೇಲ್ ಶಿವರಾಂ 2010-2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಪಟೇಲ್ ಶಿವರಾಂ ಕಾರ್ಯನಿರ್ವಹಿಸಿದ್ದರು.
ಸುಮಾರು 4 ದಶಕಗಳ ಕಾಲ ಜೆಡಿಎಸ್ನಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದ ಪಟೇಲ್ ಶಿವರಾಂ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು ಜಾತ್ಯತೀತ ಜನತಾ ದಳ ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.



