ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಂಪತ್ತಿನ ಜೀವನಕ್ಕಿಂತ ಸಚಿತೃಪ್ತ ಜೀವನ ಸಾಗಿಸಬೇಕು. ಅಂದಾಗ ಬದುಕು ಸುಂದರವಾಗುತ್ತದೆ ಎಂದು ಮಣಕವಾಡ ದೇವಮಂದಿರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣ ಸಮೀಪದ ಹರ್ತಿ ಗ್ರಾಮದಲ್ಲಿ 12 ದಿನಗಳ ಕಾಲ ನಡೆದ ವಚನ ದರ್ಶನ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈ ನಾಡಿನಲ್ಲಿನ ಸಂತರು, ಶರಣರು ಸಂಪತ್ತಿನ ಜೀವನಕ್ಕಿಂತ ಸಂತೃಪ್ತ ಜೀವನ ನಡೆಸಿದರು. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಪತ್ತಿನ ಬೆನ್ನು ಹತ್ತಿ ಸಂತೃಪ್ತಿಯ ಬದುಕನ್ನು ಮರೆಯುತ್ತಿದ್ದು, ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ಪರೋಪಕಾರದಿಂದ ಬಾಳಿದಾಗ ಬದುಕು ಹಸನಾಗುತ್ತದೆ. ಬಸವಣ್ಣವರ ವಚನಗಳನ್ನು ಮಕ್ಕಳಿಗೆ ನಿತ್ಯ ಹೇಳಬೇಕು, ಉತ್ತಮ ಸಂಸ್ಕಾರ, ನಡೆ-ನುಡಿ, ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು. ಇಂದು ಅನ್ಯಾಯ, ಅತ್ಯಾಚಾರ ಹೆಚ್ಚಾಗಲು ನಾವೆಲ್ಲರೂ ಧರ್ಮವನ್ನು ಮರೆತಿರುವುದೇ ಕಾರಣವಾಗಿದ್ದು, ಇಂತಹ ಸಂದರ್ಭದಲ್ಲಿ ಪ್ರವಚನಗಳು, ಶರಣರ ಚಿಂತನ-ಮಂಥನಗಳು ತುಂಬಾ ಸಹಕಾರಿ. ಧರ್ಮದ ಹಾದಿಯಲ್ಲಿ ಸಾಗಿದಾಗ ಬದುಕು ಬಂಗಾರವಾಗುತ್ತದೆ ಎಂದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಾಹಾಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಮಾಹಾಸ್ವಾಮೀಜಿ, ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಅಕ್ಕಿ ಆಲೂರ ಅಭಿನವ ಸಿದ್ಧರಾಮ ಮಾಹಾಸ್ವಾಮೀಜಿ, ಅಪ್ಪಣ್ಣಾ ಇನಾಮತಿ, ಎಸ್.ಸಿ. ಬಡ್ನಿ, ಕೆ.ವಿ. ಹಂಚಿನಾಳ, ವಿಜಯಕುಮಾರ ಗಡ್ಡಿ, ಡಿ.ಕೆ. ಲಕ್ಕಣ್ಣವರ ಇದ್ದರು.