ಚಾಮರಾಜನಗರ:- ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆಯನ್ನು ಸೆರೆ ಹಿಡಿಯುವುದಕ್ಕೆಂದು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡ ಘಟನೆ ಜರುಗಿದೆ.
ಹನುಮಂತಯ್ಯ ಬೋನಿಗೆ ಬಿದ್ದ ವ್ಯಕ್ತಿ. ಗ್ರಾಮದ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಚಿರತೆಯನ್ನು ಸೆರೆ ಹಿಡಿದು ಜನರಿಗೆ ಸುರಕ್ಷತೆ ಒದಗಿಸುವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮಹದೇವಸ್ವಾಮಿ ಎಂಬವರ ಜಮೀನಿನಲ್ಲಿ ಬೋನು ಇಟ್ಟಿದ್ದರು. ಜೊತೆಗೆ ಬೋನಿನ ಒಳಗೆ ಕರು ಒಂದನ್ನು ಇರಿಸಿದ್ದರು.
ಇಷ್ಟೆಲ್ಲಾ ಆದ ಬಳಿಕ ಹನುಮಂತಯ್ಯ ಬೋನಿನ ಸಮೀಪ ಹೋಗಿದ್ದಾನೆ. ಬೋನು ಹೇಗಿದೆ ಎಂದು ನೋಡಲು ಒಳಗಡೆ ಹೋಗಿದ್ದಾನೆ. ಆತ ಒಳಗಡೆ ಹೋಗುತ್ತಿದ್ದಂತೆಯೇ ಬೋನಿನ ಗೇಟ್ ಲಾಕ್ ಆಗಿದೆ. ಹೀಗಾಗಿ ಸುಮಾರು ನಾಲ್ಕೈದು ಗಂಟೆ ಆತ ಅದರ ಒಳಗಡೆ ಸಿಲುಕಿದ್ದಾನೆ ಎಂದು ತಿಳಿದು ಬಂದಿದೆ.
ಕೆಟ್ಟ ಕುತೂಹಲ ಒಮ್ಮೊಮ್ಮೆ ಎಂಥಾ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ ಆಗಿದೆ.